ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಉಗಾಂಡ ವಿದ್ಯಾರ್ಥಿನಿ ಸಾವು ; ಗೀತಂ ವಿವಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ 

28-04-22 03:17 pm       HK Desk News   ಕರ್ನಾಟಕ

ತಾಲೂಕಿನ ನಾಗದೇನಹಳ್ಳಿಯ ಗೀತಂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಉಗಾಂಡ ಮೂಲದ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ. ಇದರಿಂದ ಉದ್ರಿಕ್ತರಾದ ಹಾಸ್ಟೆಲ್ ವಿದ್ಯಾರ್ಥಿಗಳು ಕಾಲೇಜಿಗೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದೊಡ್ಡಬಳ್ಳಾಪುರ, ಎ.28 : ತಾಲೂಕಿನ ನಾಗದೇನಹಳ್ಳಿಯ ಗೀತಂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಉಗಾಂಡ ಮೂಲದ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ. ಇದರಿಂದ ಉದ್ರಿಕ್ತರಾದ ಹಾಸ್ಟೆಲ್ ವಿದ್ಯಾರ್ಥಿಗಳು ಕಾಲೇಜಿಗೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೃತ ಯುವತಿಯನ್ನು ಉಗಾಂಡ ದೇಶದ ಮೂಲದ ಆಸಿನಾ ಉವಾಸೆ (24) ಎಂದು ಗುರುತಿಸಲಾಗಿದ್ದು, ಬಿಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಬುಧವಾರ ರಾತ್ರಿ ಒಣಗಿಸಲು ಹಾಕಿದ್ದ ಬಟ್ಟೆಯನ್ನು ತರಲು ಆರನೇ ಮಹಡಿಯನ್ನು ಹತ್ತಿದ್ದಾಗ, ಆಕಸ್ಮಿಕವಾಗಿ ಬಿದ್ದು ಸಾವನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಗೆ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆಯೇ ಕಾರಣವೆಂದು ಕೆರಳಿದ ವಿದ್ಯಾರ್ಥಿಗಳು ದಾಂಧಲೆ ಎಬ್ಬಿಸಿದ್ದು, ಕಲ್ಲು ತೂರಾಟ ನಡೆಸಿ‌ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಡಿವೈಎಸ್ಪಿ ನಾಗರಾಜ್, ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 

ಕೆಲವು ದಿನಗಳ ಹಿಂದಷ್ಟೇ ಇದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ವಿಷಯ ಪೊಲೀಸ್ ಠಾಣೆ ಮೇಟ್ಟಿಲೇರಿತ್ತು. ಈಗ ಮತ್ತೆ ವಿದ್ಯಾರ್ಥಿನಿ ಸಾವಿನಿಂದ ಮತ್ತೆ ಸುದ್ದಿಯಾಗಿದೆ.

African student jumps from 6th floor of college hostel in Dhodballapura in Bangalore, dies on spot.