ಹೊರಟ್ಟಿ ಸೇರ್ಪಡೆಯಿಂದ ಬಿಜೆಪಿಯಲ್ಲೇ ಅಸಮಾಧಾನ ; ಪಕ್ಷದ ಭದ್ರಕೋಟೆಗೆ ಬೇರೆ ಪಕ್ಷದವರು ಯಾಕೆ ಬೇಕು ? 76 ವರ್ಷದವರಿಗೆ ಹೇಗೆ ಟಿಕೆಟ್ ಕೊಡ್ತೀರಿ ಎಂದು ಆಕ್ರೋಶ 

04-05-22 03:58 pm       HK Desk News   ಕರ್ನಾಟಕ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿಯೊಳಗೇ ಅಸಮಾಧಾನ, ಆಕ್ರೋಶದ ಅಲೆ ಎದ್ದಿದೆ. ಬಿಜೆಪಿ ಹೈಕಮಾಂಡ್ ನಾಯಕರ ವಿರುದ್ಧ ಮೂಲ ಬಿಜೆಪಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಹುಬ್ಬಳ್ಳಿ, ಮೇ 4 : ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿಯೊಳಗೇ ಅಸಮಾಧಾನ, ಆಕ್ರೋಶದ ಅಲೆ ಎದ್ದಿದೆ. ಬಿಜೆಪಿ ಹೈಕಮಾಂಡ್ ನಾಯಕರ ವಿರುದ್ಧ ಮೂಲ ಬಿಜೆಪಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬೇರೆ ಪಕ್ಷದಿಂದ ನಾಯಕರನ್ನು ಕರೆತರುವಷ್ಟು ಹೀನಾಯ ಸ್ಥಿತಿಗೆ ಬಿಜೆಪಿ ತಲುಪಿದ್ಯಾ ಅನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. 

ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮೋಹನ್ ಲಿಂಬೇಕಾಯಿ, ಬಿಜೆಪಿ ನಾಯಕರ ನಡೆಯನ್ನು ಪ್ರಶ್ನಿಸಿದ್ದಾರೆ. ಹೊರಟ್ಟಿ ಅವರನ್ನು ಯಾರೂ ಆಹ್ವಾನ ಮಾಡಿರಲಿಲ್ಲ. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನನ್ನ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಗೆ ಕಳಿಸಲಾಗಿತ್ತು. ಚುನಾವಣಾ ತಯಾರಿ ಮಾಡಿಕೊಳ್ಳುವಂತೆಯೂ ನನಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.‌ ನನಗೆ ಹಸಿರು ನಿಶಾನೆ ತೋರಿಸಿದವರೇ ಹೊರಟ್ಟಿ ಅವರನ್ನು ಬಿಜೆಪಿಗೆ ಕರೆತಂದಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿಕಾರಿದ್ದಾರೆ. 

ಈ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಜಿಲ್ಲೆಗಳು ಬರುತ್ತವೆ. 22 ಶಾಸಕರ ಪೈಕಿ 17 ಶಾಸಕರು ಬಿಜೆಪಿಯವರೇ ಇದ್ದಾರೆ. ನಾಲ್ಕು ಜನ ಎಂ.ಎಲ್.ಸಿ., ಮೂರು ಜನ ಎಂ.ಪಿ.ಗಳಿದ್ದಾರೆ. ನಮ್ಮದು ಶಿಸ್ತಿನ ಪಕ್ಷ ಅಂತ ನಂಬಿದ್ದೆವು. ಇದೆಲ್ಲವನ್ನೂ ನಂಬಿ ಚುನಾವಣಾ ತಯಾರಿ ಮಾಡಿಕೊಂಡಿದ್ದೆ.‌ ಬಿಜೆಪಿ ಭದ್ರಕೋಟೆಗೆ ಬೇರೆ ಪಕ್ಷದವರನ್ನು ಕರೆತರುವ ಅವಶ್ಯಕತೆ ಏನಿತ್ತು. ಈ ಬೆಳವಣಿಗೆಯಿಂದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವಾಗಿದೆ. ಬಿಜೆಪಿ ಪಕ್ಷ ಅಷ್ಟೊಂದು ಹೀನಾಯ ಸ್ಥಿತಿಗೆ ತಲುಪಿತಾ..? ಎಂದು ಮೋಹನ ಲಿಂಬಿಕಾಯಿ ಪ್ರಶ್ನೆ ಮಾಡಿದ್ದಾರೆ. ‌

Former MLC Mohan Limbikai is BS Yediyurappa's legal adviser

ಕೋರ್ ಕಮಿಟಿ ಸಭೆಯಲ್ಲಿಯೂ ನನ್ನದೇ ಹೆಸರು ಅಂತಿಮಗೊಂಡಿತ್ತು. ನನ್ನದೇ ಹೆಸರು ಕಳಿಸಿದ್ದರಿಂದ ಹುಮ್ಮಸ್ಸಿನಿಂದ ಚುನಾವಣೆ ತಯಾರಿ ಮಾಡಿಕೊಂಡಿದ್ದೆ. ಈ ನಡುವೆ, ಇಂತಹ ಬೆಳವಣಿಗೆಯಿಂದ ತುಂಬಾ ಬೇಸರವಾಗಿದೆ. ನನ್ನ ಗೆಳೆಯರು, ಹಿತೈಷಿಗಳು, ಕಾರ್ಯಕರ್ತರು ಮತ್ತು ಶಿಕ್ಷಕರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಚುನಾವಣಾ ಅಖಾಡಕ್ಕೆ ಇಳಿಯುವ ಬಗ್ಗೆ ಶೀಘ್ರವೇ ತೀರ್ಮಾನಿಸ್ತೇನೆ. ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆ ಯಾರಿಂದಲೂ ಆಗಿಲ್ಲ. ಹೀಗಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸೋಕೆ ಚುನಾವಣೆಗೆ ನಿಲ್ಲುವ ಬಗ್ಗೆ ಚರ್ಚಿಸ್ತೇನೆ ಎಂದು ಬಂಡಾಯ ನಿಲ್ಲುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದರು. 

75 ವರ್ಷ ದಾಟಿದವರಿಗೆ ಜವಾಬ್ದಾರಿಯುತ ಸ್ಥಾನ ನೀಡುವುದಿಲ್ಲ ಅಂತಾರೆ ಕೇಂದ್ರ ನಾಯಕರು. ಬಿಜೆಪಿ ಪಕ್ಷದ ಸಿದ್ಧಾಂತದ ಪ್ರಕಾರ ಟಿಕೇಟ್ ಕೊಡಬಾರದು ಅಂತನೇ ಇದೆ. ಹೊರಟ್ಟಿ ಅವರಿಗೆ 76 ವರ್ಷ ಪೂರ್ಣಗೊಂಡಿದೆ. ಈ ವಿಷಯ ಗೊತ್ತಿದ್ದೂ ಅವರಿಗೇ ಟಿಕೇಟ್ ಕೊಡುತ್ತಾರೆ ಅಂದ್ರೆ ಏನರ್ಥ. ರಾಷ್ಟ್ರೀಯ ನಾಯಕರೇ ಅವರನ್ನು ಭೇಟಿಯಾಗ್ತಾರೆ, ಟಿಕೇಟ್ ಕೊಡೋದಾಗಿ ಹೇಳ್ತಾರೆ ಅಂದ್ರೆ ಏನು ಅರ್ಥ. ಬಿಜೆಪಿ ಸಿದ್ಧಾಂತ ಒಂದು, ಅವರ ನಡೆ ಮತ್ತೊಂದು ಬಿಜೆಪಿ ಸಿದ್ಧಾಂತವೇ ತಪ್ಪು ಅಥವಾ ನಾಯಕರ ನಡೆಯೇ ತಪ್ಪೆನಿಸಲಾರಂಭಿಸಿದೆ ಎಂದು ಮೋಹನ ಲಿಂಬಿಕಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

Chairperson Basavaraja Horatti has quit and joined BJP in Hubli-Dharwad. The original BJP members have been outraged against the BJP high command leaders.