ಬಿ.ಎಸ್. ವೈ ಬಳಿಕ ಪುತ್ರಿ ಕೂಡ ಪಾಸಿಟಿವ್

03-08-20 05:14 am       Bangalore Correspondent   ಕರ್ನಾಟಕ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಅವರ ಪುತ್ರಿ ಪದ್ಮಾವತಿ ಅವರಿಗೂ ಸೋಂಕು ತಗುಲಿದೆ.

ಬೆಂಗಳೂರು (ಆ.3): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಅವರ ಪುತ್ರಿ ಪದ್ಮಾವತಿ ಅವರಿಗೂ ಸೋಂಕು ತಗುಲಿದೆ.

ಭಾನುವಾರ ರಾತ್ರಿ ನಡೆಸಿದ ಪರೀಕ್ಷೆ ವೇಳೆ ಪದ್ಮಾವತಿ ಅವರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ. ಅವರನ್ನೂ ಸಹ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆಯ 5ನೇ ಮಹಡಿಯ ವಿಶೇಷ ವಾರ್ಡ್ ನಲ್ಲಿ ಸಿಎಂ ಯಡಿಯೂರಪ್ಪ ದಾಖಲಾಗಿದ್ದು, ಪಕ್ಕದ ವಿಶೇಷ ವಾರ್ಡ್ ನಲ್ಲಿ ಪುತ್ರಿ ಪದ್ಮಾವತಿ ಅವರು ದಾಖಲಾಗಿದ್ದಾರೆ. ಪುತ್ರಿ ಪದ್ಮಾವತಿ ಅವರೇ ತಂದೆಯ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಅಲ್ಲದೆ ಪದ್ಮಾವತಿ ಅವರು ಫೋನ್ ಮೂಲಕ ಕುಟುಂಬದವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಸಿಎಂ ಪುತ್ರ ವಿಜಯೇಂದ್ರ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಆದರೆ ಪುತ್ರಿ ಪದ್ಮಾವತಿ ಅವರಿಗೆ ಪಾಸಿಟಿವ್ ಬಂದಿದೆ. ಸಿಎಂಗೆ ಹಾಗೂ ಪುತ್ರಿಗೆ ಸೋಂಕು ತಗುಲಿದ ಹಿನ್ನೆಲೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ವಿಜಯೇಂದ್ರ ಅವರು 1 ವಾರಗಳ ಕಾಲ ಕ್ವಾರಂಟೈನ್ ಆಗುತ್ತಿದ್ದಾರೆ.

ಸಿಎಂ ಯಡಿಯೂಪ್ಪನವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಕುರಿತು ಭಾನುವಾರ ರಾತ್ರಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ನನ್ನ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದರು. ಸಿಎಂ ಸಹ ಚಿಕಿತ್ಸೆಗಾಗಿ ಎಚ್‍ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.