ಇಲಾಖೆಗೂ ಮೆತ್ತಿಕೊಂಡ ಪಿಎಸ್ಐ ಅಕ್ರಮದ ಲೇಪ ; ಡಿವೈಎಸ್ಪಿ ಸೇರಿ ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನ

05-05-22 07:40 pm       HK Desk News   ಕರ್ನಾಟಕ

ಪಿಎಸ್ಐ ನೇಮಕಾತಿ ಪ್ರಕರಣದ ತನಿಖೆ ಚುರುಕಾಗುತ್ತಿದ್ದಂತೆ ಅಕ್ರಮದ ಲೇಪ ಪೊಲೀಸ್ ಇಲಾಖೆಗೂ ಮೆತ್ತಿಕೊಂಡಿದೆ. ಪ್ರಕರಣದ ಬೆನ್ನತ್ತಿರುವ ಸಿಐಡಿ ಅಧಿಕಾರಿಗಳು ಪೊಲೀಸರ ಮೇಲೆ ಚಾಟಿ ಬೀಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಒಬ್ಬರು ಡಿವೈಎಸ್ಪಿ ಸೇರಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಿಐಡಿ ತಂಡ ಬಂಧಿಸಿದೆ.

ಕಲಬುರಗಿ, ಮೇ 5: ಪಿಎಸ್ಐ ನೇಮಕಾತಿ ಪ್ರಕರಣದ ತನಿಖೆ ಚುರುಕಾಗುತ್ತಿದ್ದಂತೆ ಅಕ್ರಮದ ಲೇಪ ಪೊಲೀಸ್ ಇಲಾಖೆಗೂ ಮೆತ್ತಿಕೊಂಡಿದೆ. ಪ್ರಕರಣದ ಬೆನ್ನತ್ತಿರುವ ಸಿಐಡಿ ಅಧಿಕಾರಿಗಳು ಪೊಲೀಸರ ಮೇಲೆ ಚಾಟಿ ಬೀಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಒಬ್ಬರು ಡಿವೈಎಸ್ಪಿ ಸೇರಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಿಐಡಿ ತಂಡ ಬಂಧಿಸಿದೆ.

ಅಕ್ರಮದ ಕಿಂಗ್ ಪಿನ್ ಎನ್ನಲಾಗಿರುವ ಆರ್.ಡಿ. ಪಾಟೀಲ ಜೊತೆಗೆ ಹತ್ತಿರದ ಲಿಂಕ್ ಹೊಂದಿದ್ದ ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಕಲಬುರಗಿ ನಗರ ಸಿಪಿಐ ಆನಂದ ಮೇತ್ರೆ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆಯಿಂದ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳು ಇಂದು ಇಬ್ಬರನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕಲಬುರಗಿ ಜಿಲ್ಲಾ ಮೂರನೇ ಜೆಎಂಎಫ್ ಕೋರ್ಟ್ ಮುಂದೆ ಇಬ್ಬರನ್ನೂ ಹಾಜರುಪಡಿಸಿದ್ದು ಎಂಟು ದಿನ ಸಿಐಡಿ ಕಸ್ಟಡಿಗೆ ಪಡೆದಿದ್ದಾರೆ.

ಆರೋಪಿಗಳ ಬಂಧನ ಒಂದೆಡೆಯಾದರೆ, ಇನ್ನೊಂದೆಡೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯ ಲೋಪ ಆರೋಪದಲ್ಲಿ ಅಮಾನತು ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಉಸ್ತುವಾರಿ ಹೊಂದಿದ್ದ ಫಿಂಗರ್ ಪ್ರಿಂಟ್ ವಿಭಾಗದ ಡಿವೈಎಸ್ಪಿ ಆರ್.ಆರ್. ಹೊಸಮನಿ ಹಾಗೂ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದ ಉಸ್ತುವಾರಿ ಹೊಂದಿದ್ದ ಕಲಬುರಗಿ ಮಹಿಳಾ ಠಾಣೆ ಇನ್ ಸ್ಪೆಕ್ಟರ್ ದಿಲೀಪ್ ಸಾಗರ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಇದೇ ವೇಳೆ ನಾಲ್ಕು ದಿನಗಳ ಹಿಂದಷ್ಟೇ ರಿಟೈರ್ ಆಗಿದ್ದ ಡಿವೈಎಸ್ಪಿ ಒಬ್ಬರನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಖಚಿತ ಸಾಕ್ಷ್ಯ ಸಿಕ್ಕಲ್ಲಿ ಆ ವ್ಯಕ್ತಿಯನ್ನೂ ಬಂಧಿಸುವ ಸಾಧ್ಯತೆಯಿದೆ.

Two including DYSP suspended in PSI exam scam in Kalaburgi.