ಸಕಲೇಶಪುರ ; ಎಸ್ಟೇಟ್ ಕಾರ್ಮಿಕರ ಮೇಲೆ ಕಾಡಾನೆ ಹಿಂಡು ದಾಳಿ, ಒಬ್ಬ ಸಾವು 

10-05-22 05:47 pm       HK Desk News   ಕರ್ನಾಟಕ

ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಹಿಂಡು ದಾಳಿ ನಡೆಸಿದ್ದು ಕೂಲಿ ಕಾರ್ಮಿಕ ಬಲಿಯಾಗಿದ್ದಾನೆ. 

ಸಕಲೇಶಪುರ, ಮೇ 10: ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಹಿಂಡು ದಾಳಿ ನಡೆಸಿದ್ದು ಕೂಲಿ ಕಾರ್ಮಿಕ ಬಲಿಯಾಗಿದ್ದಾನೆ. 

ಕೆಂಪನಾಲೆ ಗ್ರಾಮದ ರವಿ(40) ಮೃತ ಕಾರ್ಮಿಕ. ಎಸ್ಟೇಟ್‌ನಲ್ಲಿ 20 ಜನ ಕಾರ್ಮಿಕರು ಯಂತ್ರದ ಮೂಲಕ ಕೆಲಸ ಮಾಡುತ್ತಿದ್ದ ವೇಳೆ 20ಕ್ಕೂ ಹೆಚ್ಚಿದ್ದ ಕಾಡಾನೆಗಳ ಹಿಂಡು ನುಗ್ಗಿ ಬಂದಿದೆ. ಈ ವೇಳೆ, ಒಂದು ಆನೆ ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ಅಲ್ಲಿದ್ದ ಕಾರ್ಮಿಕರು ದಿಕ್ಕಪಾಲಾಗಿ ಓಡಿದ್ದು ತಪ್ಪಿಸಿಕೊಳ್ಳಲು ಸಾಧ್ಯವಾಗದ ರವಿ ಎಂಬಾತ ನೆಲಕ್ಕೆ ಬಿದ್ದಿದ್ದು ಆತನ ಮೇಲೆ ಆನೆ ಕಾಲಿಟ್ಟು ತುಳಿದು ಹತ್ಯೆ ಮಾಡಿದೆ. 

ಬೆಳಗೋಡು ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಆಗಮಿಸಿ ಕಾಡಾನೆ ಸಮಸ್ಯೆ ಪರಿಹರಿಸದ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳ ಹಿಂದೆಯೂ ಇದೇ ಪರಿಸರದ ಕಡೆಗರ್ಜೆ ಎಂಬ ಗ್ರಾಮದಲ್ಲಿ ಇಬ್ಬರು ಕಾರ್ಮಿಕರು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದರು. 

ಸ್ಥಳಿಯರು ಮೃತದೇಹ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಧಿಕಾರಿಗಳು ಕುಟುಂಬಸ್ಥರನ್ನು ಮನವೊಲಿಸಿ ಪ್ರತಿಭಟನೆ ಹಿಂದೆ ಪಡೆಯುವಂತೆ ಮಾಡಿದ್ದಾರೆ.

Wild elephant kills elderly man at Estate at Sakleshpura.