ಬಿಜೆಪಿ ಕಟ್ಟಿ ಬೆಳೆಸಿದ ಅಜಾನುಬಾಹು ಜಸ್ವಂತ್ ಇನ್ನು ನೆನಪು ಮಾತ್ರ ! 

27-09-20 10:23 am       Headline Karnataka News Network   ದೇಶ - ವಿದೇಶ

ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ ಜಸ್ವಂತ್ ಸಿಂಗ್ (82) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

ನವದೆಹಲಿ, ಸೆಪ್ಟಂಬರ್ 27: ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ ಜಸ್ವಂತ್ ಸಿಂಗ್ (82) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

ವಾಜಪೇಯಿ ಸಂಪುಟದಲ್ಲಿ ವಿದೇಶಾಂಗ, ರಕ್ಷಣಾ ಖಾತೆ ಮತ್ತು ಹಣಕಾಸು ಖಾತೆಗಳನ್ನು ನಿರ್ವಹಿಸಿದ್ದ ಜಸ್ವಂತ್ ಸಿಂಗ್, 2014ರಲ್ಲಿ ಪಕ್ಷದಿಂದ ಟಿಕೆಟ್ ಸಿಗದ ಕೋಪದಲ್ಲಿ ತಮ್ಮ ಹುಟ್ಟೂರು ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ ಗೆಲುವು ಸಿಗದೆ ನಿರಾಶರಾಗಿದ್ದರು. ಆನಂತರ ಮನೆಯ ಬಳಿ ಆಯತಪ್ಪಿ ಬಿದ್ದು ತಲೆಗೆ ಗಾಯಗೊಂಡು ಕೋಮಾಕ್ಕೆ ಜಾರಿದ್ದರು. ಆರು ವರ್ಷಗಳಿಂದ ಕೋಮಾದಲ್ಲೇ ಇದ್ದ ಅವರನ್ನು ಕಳೆದ ಜೂನ್ 25ರಂದು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯ ಆಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ನಸುಕಿನಲ್ಲಿ ಹೃದಯಘಾತ ಸಂಭವಿಸಿ, ಕೊನೆಯುಸಿರು ಎಳೆದರೆಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು ನೆಗೆಟಿವ್ ಕಂಡುಬಂದಿದೆ. 

ಮೂಲತಃ ಸೇನಾಧಿಕಾರಿ ಆಗಿದ್ದ ಜಸ್ವಂತ್ ಸಿಂಗ್ ಮೇಜರ್ ಹುದ್ದೆಯಲ್ಲಿದ್ದರು. ನಡುವೆ ನಿವೃತ್ತಿ ಪಡೆದು ರಾಜಕೀಯ ಪಕ್ಷ ಸೇರಿದ್ದರು. 1979ರಲ್ಲಿ ವಾಜಪೇಯಿ ಮತ್ತು ಆಡ್ವಾಣಿ ಜನತಾ ಪಾರ್ಟಿಯಿಂದ ಹೊರಬಂದು ಬಿಜೆಪಿ ಕಟ್ಟಿದಾಗ ಅವರ ಜೊತೆ ಜಸ್ವಂತ್ ಸಿಂಗ್ ಕೂಡ ಇದ್ದರು. ವಾಜಪೇಯಿ ಸರಕಾರದ ಬಳಿಕ ಅವರಿಗೆ ಪಕ್ಷದಲ್ಲಿ ಹುದ್ದೆಗಳು ಸಿಗಲಿಲ್ಲ. 2009ರಲ್ಲಿ ಪಾಕಿಸ್ತಾನದ ಜನಕ ಮಹಮ್ಮದ್ ಆಲಿ ಜಿನ್ನಾನ ಬಗ್ಗೆ ಪುಸ್ತಕ ಬರೆದಿದ್ದಕ್ಕೆ ಬಿಜೆಪಿಯಿಂದಲೇ ಉಚ್ಚಾಟನೆಗೊಂಡಿದ್ದರು. ಎರಡು ವರ್ಷದ ತರುವಾಯ ಮರಳಿ ಪಕ್ಷವನ್ನು ಸೇರಿದ್ದೂ ಆಗಿತ್ತು‌. ಹೀಗೆ ಸುದೀರ್ಘ ರಾಜಕೀಯ ಜೀವನ, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿಯಿಂದ ಹಿಡಿದು ಹಳೆ ತಲೆಮಾರಿನ ರಾಜಕೀಯ ಸಾಧಕರ ಜೊತೆ ಜೀವ ತೇಯ್ದ ಜಸ್ವಂತ್ ಸಿಂಗ್ ಇನ್ನು ನೆನಪು ಮಾತ್ರ. ಅವರ ಅಜಾನುಬಾಹು ದೇಹದಂತೆಯೇ ವ್ಯಕ್ತಿತ್ವವೂ ಕೂಡಿತ್ತು. ಹಣಕಾಸು, ರಕ್ಷಣಾ ವ್ಯವಹಾರಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅತ್ಯಂತ ವಿರಳ ವ್ಯಕ್ತಿಗಳಲ್ಲಿ ಜಸ್ವಂತ್ ಒಬ್ವರು. 

ಬಾರ್ಮರ್ ಕ್ಷೇತ್ರದಲ್ಲಿ 9 ಬಾರಿ ಸಂಸದರಾಗಿರುವ ಜಸ್ವಂತ್ ಸಿಂಗ್, 1998-99ರಲ್ಲಿ ಬಿಜೆಪಿ ಲೋಕಸಭೆಯಲ್ಲಿ ಬಹುಮತ ಪಡೆದಾಗ ಸೋತಿದ್ದರು. ಬಳಿಕ ವಾಜಪೇಯಿಯವರು ಜಸ್ವಂತ್ ಅವರನ್ನು ರಾಜ್ಯಸಭೆಗೆ ತರಿಸಿಕೊಂಡು ತಮ್ಮ ಸರಕಾರದಲ್ಲಿ ವಿವಿಧ ಹುದ್ದೆಗಳನ್ನು ನೀಡಿದ್ದರು. ವಾಜಪೇಯಿ ಸರಕಾರದಲ್ಲಿ ಟ್ರಬಲ್ ಶೂಟರ್ ಎಂದೇ ಜಸ್ವಂತ್ ಕರೆಸಿಕೊಂಡಿದ್ದರು. ಯಾವುದೇ ಸಮಸ್ಯೆ ಎದುರಾದರೂ ಚಾಣಾಕ್ಷತೆಯಿಂದ ನಿವಾರಿಸುತ್ತಿದ್ದ ಸಿಂಗ್ ಗುಣ ವಾಜಪೇಯಿ ಅವರನ್ನು ಆಕರ್ಷಿಸಿತ್ತು. ಅಂತಾರಾಷ್ಟ್ರೀಯ ವ್ಯವಹಾರ, ರಕ್ಷಣೆ, ಪರಿಸರ, ವನ್ಯಜೀವಿಗಳ ಬಗ್ಗೆ ಆಸಕ್ತರಾಗಿದ್ದ ಅವರು ಇದೇ ವಿಚಾರದಲ್ಲಿ ಆರು ಪುಸ್ತಕ ಬರೆದಿದ್ದಾರೆ. ಉಳಿದಂತೆ ಗಾಲ್ಫ್ ಆಡುವುದು ಮತ್ತು ಚೆಸ್ ಅವರ ಮೆಚ್ಚಿನ ಆಟಗಳಾಗಿದ್ದವು.

Join our WhatsApp group for latest news updates (2)