ಕೊನೆಗಾದ್ರೂ ಎಸ್ಪಿಬಿಯನ್ನು ನೋಡಲು ಆಗಲಿಲ್ಲ ; ಯೇಸುದಾಸ್ ವಿಷಾದ ಬರಹ

27-09-20 03:49 pm       Headline Karnataka News Network   ದೇಶ - ವಿದೇಶ

ಸ್ವರ ಸಾಮ್ರಾಟ ಎಸ್ಪಿ ಬಾಲಸುಬ್ರಹ್ಮಣ್ಯಂ ಅಗಲಿಕೆಯ ಬಗ್ಗೆ ದಕ್ಷಿಣ ಭಾರತದ ಮತ್ತೊಬ್ಬ ಸಂಗೀತ ಮಾಂತ್ರಿಕ ಕೆ.ಜೆ. ಯೇಸುದಾಸ್ ಭಾವಪೂರ್ಣ ಪತ್ರ ಬರೆದಿದ್ದಾರೆ.

ಚೆನ್ನೈ, ಸೆಪ್ಟಂಬರ್ 27: ಸ್ವರ ಸಾಮ್ರಾಟ ಎಸ್ಪಿ ಬಾಲಸುಬ್ರಹ್ಮಣ್ಯಂ ಅಗಲಿಕೆಯ ಬಗ್ಗೆ ದಕ್ಷಿಣ ಭಾರತದ ಮತ್ತೊಬ್ಬ ಸಂಗೀತ ಮಾಂತ್ರಿಕ ಕೆ.ಜೆ. ಯೇಸುದಾಸ್ ಭಾವಪೂರ್ಣ ಪತ್ರ ಬರೆದಿದ್ದಾರೆ. ನನ್ನ ಬಹುಕಾಲದ ಗೆಳೆಯ, ಸೋದರ ಅಗಲಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೊನೆಯ ಬಾರಿಗೆ ನೋಡಬೇಕೆಂಬ ಆಸೆಯನ್ನೂ ಕೊರೊನಾದಿಂದ ಈಡೇರಿಸಿಕೊಳ್ಳಲು ಆಗಿಲ್ಲ ಎಂದು ವಿಷಾದಿಸಿದ್ದಾರೆ.

ನನ್ನ ಸಹೋದ್ಯೋಗಿಗಳ ಪೈಕಿ ಬಾಲು ನನಗೆ ಹತ್ತಿರದ ಸೋದರನಿದ್ದಂತೆ. ಬಾಲು ನನ್ನನ್ನು ಆ ರೀತಿ ನೋಡಿಕೊಂಡಿದ್ದರೇ ಗೊತ್ತಿಲ್ಲ, ಎಸ್ಪಿಬಿ ಮತ್ತು ನನ್ನ ನಡುವಿನ ಸಂಬಂಧ ಮುಂದೆಯೂ ಹಾಗೇ ಇರಲಿದೆ. ಶಾಸ್ತ್ರೀಯ ಶೈಲಿಯಲ್ಲಿ ಸಂಗೀತ ಕಲಿಯದೇ ಇದ್ದರೂ ಎಸ್ಪಿಬಿಯವರ ಸಂಗೀತ ಜ್ಞಾನ ಅಗಾಧ ಆಗಿತ್ತು, ಅವರು ಹಾಡುತ್ತಿದ್ದರು. ಜೊತೆಯಲ್ಲೇ ಮ್ಯೂಸಿಕ್ ಕಂಪೋಸ್ ಕೂಡ ಮಾಡುತ್ತಿದ್ದರು. ಶಂಕರಾಭರಣಂ ಚಿತ್ರದಲ್ಲಿ ಎಸ್ಪಿಬಿಯವರ ಸಂಗೀತ ಜ್ಞಾನ ನಮ್ಮ ಅರಿವಿಗೆ ಬರುತ್ತದೆ. ಶಾಸ್ತ್ರೀಯವಾಗಿ ಕಲಿತು ಬಂದಿದ್ದ ಇನ್ನೊಬ್ಬರ ಜೊತೆಗೆ ಎಸ್ಪಿಯವರು ಅಮೋಘವಾಗಿ ಹಾಡಿದ್ದರು. ಬಾಲು ಯಾರಿಗೂ ನೋವು ತಂದವರಲ್ಲ. ಅಂದ್ರೆ ಎಲ್ಲರನ್ನೂ ಪ್ರೀತಿಸುತ್ತಿದ್ದರು. ಎಲ್ಲರೊಂದಿಗೆ ಆಪ್ತವಾಗಿರುತ್ತಿದ್ದರು. ಒಂದೊಮ್ಮೆ ಎಸ್ಪಿಯವರು ತಮ್ಮ ಕೈಯಾರೆ ತಯಾರಿಸಿದ್ದ ಊಟ ಮಾಡುವ ಅವಕಾಶವೂ ನನಗೆ ಲಭಿಸಿತ್ತು. ಪ್ಯಾರಿಸ್ ನಲ್ಲಿ ಕಾರ್ಯಕ್ರಮಕ್ಕಾಗಿ ತಂಗಿದ್ದ ವೇಳೆ, ಎಸ್ಪಿಬಿಯವರು ನಮಗಾಗಿ ತಾವೇ ಸ್ಪೆಷಲ್ ಆಗಿ ಊಟ ತಯಾರಿಸಿದ್ದರು ಎಂದು ಸ್ಮರಿಸಿದ್ದಾರೆ.

ಕೋವಿಡ್ ಕಾರಣದಿಂದ ದೊಡ್ಡ ನಷ್ಟವನ್ನು ಅನುಭವಿಸುತ್ತಿದ್ದೇವೆ. ನನಗೆ ಅಮೆರಿಕದಿಂದ ಬರುವುದಕ್ಕೆ ಬಿಡುತ್ತಿಲ್ಲ. ಇದರಿಂದಾಗಿ ಕೊನೆಯ ಬಾರಿಗೆ ಎಸ್ಪಿಯವರನ್ನು ನೋಡುವುದಕ್ಕೂ ಆಗಿಲ್ಲ. ಅವರ ಜೊತೆಗಿನ ನೆನಪು ಮಾತ್ರ ಇರಲಿದೆ ಎಂದು ಯೇಸುದಾಸ್ ಭಾವುಕರಾಗಿ ಬರೆದಿದ್ದಾರೆ. 

Join our WhatsApp group for latest news updates (2)