ಪೊಲೀಸರು ನನ್ನ ಮೇಲೆ ಲಾಠಿ ಚಾರ್ಜ್ ಮಾಡಿ ಬೀಳಿಸಿದ್ರು ; ರಾಹುಲ್ ಗಾಂಧಿ ಆರೋಪ

01-10-20 04:05 pm       Headline Karnataka News Network   ದೇಶ - ವಿದೇಶ

ಪೊಲೀಸರು ನನ್ನ ಮೇಲೆ ಲಾಠಿ ಚಾರ್ಜ್ ಮಾಡಿ,ಕೆಳಗೆ ಬೀಳಿಸಿದರು. ಈ ದೇಶದಲ್ಲಿ ಮೋದೀಜಿ ಮಾತ್ರ ನಡೆಯಬೇಕೇ, ಸಾಮಾನ್ಯ ಮನುಷ್ಯ ನಡೆಯಬಾರದೇ? ಎಂದು ರಾಹುಲ್ ಗಾಂಧಿ ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಹೊಸದಿಲ್ಲಿ,ಅ.1: ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಉತ್ತರಪ್ರದೇಶದ ಹಥ್ರಾಸ್ ಜಿಲ್ಲೆಯತ್ತ ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ಪಡೆಯ ವಾಹನವನ್ನು ಪೊಲೀಸರು ತಡೆಹಿಡಿದರು. ಹೀಗಾಗಿ ಇವರಿಬ್ಬರು ದಿಲ್ಲಿ ಹಾಗೂ ಉತ್ತರಪ್ರದೇಶ ನಡುವಿನ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ತಮ್ಮ ಪ್ರಯಾಣ ಮುಂದುವರಿಸಿದರು. ಆದರೆ,ಪೊಲೀಸರು ಮತ್ತೆ ಇವರನ್ನು ತಡೆದ ಕಾರಣ ಕಾಂಗ್ರೆಸ್ ಮೆರವಣಿಗೆಯನ್ನು ಅಂತ್ಯಗೊಳಿಸಲಾಗಿದೆ.

"ಪೊಲೀಸರು ನನ್ನನ್ನು ಮೊದಲು ದಬ್ಬಿದರು. ಲಾಠಿ ಚಾರ್ಜ್ ಮಾಡಿ,ಕೆಳಗೆ ಬೀಳಿಸಿದರು. ಪಕ್ಷದ ಕಾರ್ಯಕರ್ತರ ಮೇಲೂ ಪೊಲೀಸರು ಲಾಠಿ ಬೀಸಿದ್ದಾರೆ. ಈ ದೇಶದಲ್ಲಿ ಮೋದೀಜಿ ಮಾತ್ರ ನಡೆಯಬೇಕೇ, ಸಾಮಾನ್ಯ ಮನುಷ್ಯ ನಡೆಯಬಾರದೇ? ಎಂದು ಪ್ರಶ್ನಿಸಲು ಬಯಸುವೆ. ನಮ್ಮ ವಾಹನವನ್ನು ತಡೆಯಲಾಯಿತು. ಹೀಗಾಗಿ ಕಾಲ್ನಡಿಗೆಯಲ್ಲಿ ಹೊರಟೆವು'' ಎಂದು ಯಮುನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುದ್ದಿಗಾರರಿಗೆ ರಾಹುಲ್ ಗಾಂಧಿ ತಿಳಿಸಿದರು.

ದಿಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದ ದಲಿತ ಯುವತಿಯನ್ನು ಉತ್ತರಪ್ರದೇಶ ಪೊಲೀಸರು ಬುಧವಾರ ರಾತ್ರಿ 2:30ರ ಸುಮಾರಿಗೆ ಅಂತ್ಯಕ್ರಿಯೆ ನಡೆಸಿದ್ದು ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.