ಹತ್ರಾಸ್ ಪ್ರಕರಣ: ಶಾಕಿಂಗ್ ಹೇಳಿಕೆ ಕೊಟ್ಟ ಯುಪಿ ಪೊಲೀಸ್!!

01-10-20 04:07 pm       Headline Karnataka News Network   ದೇಶ - ವಿದೇಶ

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ  20 ವರ್ಷದ ಯುವತಿ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಅಲಿಗಢ್​​ ಐಜಿ ಪಿಯೂಷ್​​ ಮೋರ್ಡಿಯಾ ತಿಳಿಸಿದ್ದಾರೆ.

ಉತ್ತರ ಪ್ರದೇಶ, ಅಕ್ಟೋಬರ್ 1 : ಉತ್ತರ ಪ್ರದೇಶದ ಹತ್ರಾಸ್ ನಲ್ಲಿ  20 ವರ್ಷದ ಯುವತಿ ಮೇಲೆ ನಡೆದ ಸಾಮುಹಿಕ ಅತ್ಯಾಚಾರ ಆರೋಪ ಪ್ರಕರಣ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಹತ್ರಸ್​​ ಗ್ರಾಮದಲ್ಲಿ ನಾಲ್ವರು ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದಾಳೆ ಎನ್ನಲಾದ ಯುವತಿ ದೆಹಲಿಯ ಸಫ್ದಾರ್​​ ಜಂಗ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಸಾಕಷ್ಟು ಆರೋಪ ಹಾಗು ಅನುಮಾನಗಳು ಇವೆ.

ಇದೀಗ ಮೃತಪಟ್ಟ ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಅಲಿಗಢ್​​ ಐಜಿ ಪಿಯೂಷ್​​ ಮೋರ್ಡಿಯಾ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಐಜಿ, ನಾಲ್ವರು ವ್ಯಕ್ತಿಗಳು ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲ್ಪಟ್ಟ ಹತ್ರಾಸ್ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ. ಸಾಮೂಹಿಕ ಅತ್ಯಾಚಾರವಾಗಿದೆ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಉಲ್ಲೇಖವಾಗಿಲ್ಲ ಎಂದು ಹೇಳಿದ್ದಾರೆ.  

ಸೆಪ್ಟೆಂಬರ್ 22ರಂದು ಯುವತಿಯನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು, ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರವಾಗಿರುವುದು ದೃಢಪಟ್ಟಿಲ್ಲ. ಕೆಲವೊಂದು ಸ್ಯಾಂಪಲ್ಸ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ಘಟನೆ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಐಜಿ ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಯುವತಿಯ ಸಾವಿಗೆ ಕಾರಣವಾದ  ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬರುತ್ತಿದೆ. ಈ ಮಧ್ಯೆ ಉತ್ತರಪ್ರದೇಶದ ಪೊಲೀಸರು ಯುವತಿಯ ಕುಟುಂಬಕ್ಕೆ ತಿಳಿಯದಂತೆ ಮೃತದೇಹವನ್ನು ಅಸ್ಪತ್ರೆಯಿಂದ ಶಿಫ್ಟ್ ಮಾಡಿದ್ದಾರೆ ಎಂದು ಸಹೋದರ ಗಂಭೀರವಾಗಿ ಆರೋಪ ಮಾಡಿದ್ದಾರೆ. ಯುವತಿಯ ತಂದೆ ಹಾಗೂ ಸಹೋದರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ತಮಗೆ  ಗೊತ್ತಾಗದಂತೆ  ಪೊಲೀಸರು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಸಾಗಿಸಿದ್ದಾರೆ ಎಂದು ಹೇಳಿದ್ದಾರೆ 

ಹಿಂದೂ ಸಂಪ್ರದಾಯದಂತೆ ಆಕೆಯ ಅಂತ್ಯಸಂಸ್ಕಾರ ಮಾಡಬೇಕು ಎಂದು ಬಯಸಿದ್ದೆವು. ಇತ್ತ ನಾವು ಪ್ರತಿಭಟನೆಯಲ್ಲಿ ತೊಡಗಿದ್ದಾಗ, ಅತ್ತ ಸಹೋದರಿಯ ಅಂತ್ಯಸಂಸ್ಕಾರವನ್ನು ಪೊಲೀಸರು ಮುಗಿಸಿಯೇ ಬಿಟ್ಟಿದ್ದಾರೆ. ಅವರು ಒತ್ತಾಯಪೂರ್ವಕವಾಗಿ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಅಲ್ಲದೆ ಕೊನೆಯ ಬಾರಿಗೆ ಮಗಳ ಮುಖವನ್ನು ನೋಡಲು ಕೂಡ ಬಿಟ್ಟಿಲ್ಲ ಅಂತ ಯುವತಿಯ ತಂದೆ ಕಣ್ಣೀರು ಹಾಕಿದ್ದರು