ಸಾಲ ಬಾಧೆ : ಬುರ್ಜ್ ಖಲೀಫಾ ಕಟ್ಟಿದ್ದ ಅರಬ್ಟೆಕ್ ಹೋಲ್ಡಿಂಗ್ ಮುಚ್ಚಲು ನಿರ್ಧಾರ ! 

03-10-20 08:04 pm       Headline Karnataka News Network   ದೇಶ - ವಿದೇಶ

ಸಾಲ ಬಾಧೆ ಹಾಗೂ ಸತತ ಏರಿಕೆಯಾಗುತ್ತಿರುವ ನಷ್ಟದ ಪ್ರಮಾಣದಿಂದ ಬುರ್ಜ್ ಖಲೀಫಾ ಕಟ್ಟಡವನ್ನು ನಿರ್ಮಿಸಿದ್ದ ಸಂಯುಕ್ತ ಅರಬ್ ಸಂಸ್ಥಾನದ ಅರಬ್ಟೆಕ್ ಹೋಲ್ಡಿಂಗ್ ಕಂಪೆನಿಯನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದೆ.

ದುಬೈ, ಅಕ್ಟೋಬರ್.03:  ಸಾಲ ಬಾಧೆ ಹಾಗೂ ಸತತ ಏರಿಕೆಯಾಗುತ್ತಿರುವ ನಷ್ಟದ ಪ್ರಮಾಣದಿಂದ ಬುರ್ಜ್ ಖಲೀಫಾ ಕಟ್ಟಡವನ್ನು ನಿರ್ಮಿಸಿದ್ದ ಸಂಯುಕ್ತ ಅರಬ್ ಸಂಸ್ಥಾನದ ಅರಬ್ಟೆಕ್ ಹೋಲ್ಡಿಂಗ್ ಕಂಪೆನಿಯನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದೆ. ಇದನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕಂಪೆನಿಯ ಷೇರುದಾರರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಅರಬ್ಟೆಕ್ ಸಂಸ್ಥೆಯ ಈ ನಿರ್ಧಾರ ಸಂಯುಕ್ತ ಅರಬ್ ಸಂಸ್ಥಾನದಲ್ಲಿನ ನೂರಾರು ಉಪ ಗುತ್ತಿಗೆದಾರರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗ ನಷ್ಟದ ಭೀತಿಯೂ ಎದುರಾಗಿದೆ.

ಅರಬ್ಟೆಕ್ ಸಂಸ್ಥೆಯಲ್ಲಿ ಸುಮಾರು 40,000 ಉದ್ಯೋಗಿಗಳಿದ್ದು  ಬುರ್ಜ್ ಖಲೀಫಾ ಹೊರತಾಗಿ ದೇಶದ ಹಲವು ಅತ್ಯುನ್ನತ ನಿರ್ಮಾಣಗಳಾದ ಲೂವರ್ ಮ್ಯೂಸಿಯಂ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಅಲ್-ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಅರಬ್ಟೆಕ್ ಸಂಸ್ಥೆ ನಡೆಸಿತ್ತು.

ಗಲ್ಫ್ ದೇಶದ ಸರಕಾರಗಳು ನಿರ್ಮಾಣ ಕಾಮಗಾರಿಗಳ ಮೇಲೆ ಹೂಡಿಕೆಗಳನ್ನು ಕಡಿಮೆ ಮಾಡಿರುವುದರಿಂದ ಹಲವಾರು ನಿರ್ಮಾಣ ಸಂಸ್ಥೆಗಳು ನಷ್ಟವೆದುರಿಸುತ್ತಿವೆ.