ಹತ್ರಾಸ್ ಪ್ರಕರಣ ಸಿಬಿಐಗೆ ಕೊಟ್ಟು ಕೈತೊಳೆದುಕೊಂಡ ಯೋಗಿ ಸರ್ಕಾರ

04-10-20 10:21 am       Headline Karnataka News Network   ದೇಶ - ವಿದೇಶ

ಉತ್ತರಪ್ರದೇಶದ ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸಿಎಂ ಯೋಗಿ ಆದಿತ್ಯನಾಥ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ನವದೆಹಲಿ, ಅಕ್ಟೋಬರ್. 04 : ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ಸಿಬಿಐ ತನಿಖೆಗೆ ವಹಿಸಿದೆ. 

ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶದ ಅಲೆ ಎಬ್ಬಿಸುತ್ತಿರುವಾಗಲೇ ಉತ್ತರ ಪ್ರದೇಶ ಯೋಗಿ ಸರಕಾರ ಇಡೀ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿ ಕೈತೊಳೆದುಕೊಂಡಿದೆ. ಎರಡು ದಿನಗಳ ಹಿಂದೆ ಎಸ್ಐಟಿ ತಂಡ ನೇಮಕ ಮಾಡಿ, ಏಳು ದಿನಗಳಲ್ಲಿ ವರದಿ ನೀಡುವಂತೆ ಆದೇಶ ಮಾಡಿತ್ತು. ಪ್ರಾಥಮಿಕ ವರದಿ ಆಧರಿಸಿ ಹತ್ರಾಸ್ ಜಿಲ್ಲೆಯ ಎಸ್ಪಿ, ಡಿವೈಎಸ್ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಸರಕಾರ ಅಮಾನತು ಮಾಡಿತ್ತು. ಪೊಲೀಸರು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. 

ಇದೀಗ ಸಂತ್ರಸ್ತ ಯುವತಿಯ ಕುಟುಂಬಸ್ಥರು ಸಿಬಿಐ, ಎಸ್ಐಟಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಒತ್ತಾಯ ಮಾಡಿದ ಬೆನ್ನಲ್ಲೇ ಪ್ರಕರಣವನ್ನು ಕೇಂದ್ರೀಯ ತಂಡಕ್ಕೆ ಸರಕಾರ ಒಪ್ಪಿಸಿದೆ. ಈಗ ನಡುವೆ, ಕಾಂಗ್ರೆಸ್ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ನಿರಾಕರಿಸಲಾಗಿತ್ತು. ಮಾಧ್ಯಮಕ್ಕೂ ಹತ್ರಾಸ್ ಜಿಲ್ಲೆಯ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ವಿಚಾರದಲ್ಲಿ ದೇಶದ ಹಲವೆಡೆ ಪ್ರತಿಭಟನೆ, ಆಕ್ರೋಶಕ್ಕೆ ಈಡಾಗುತ್ತಿದ್ದಂತೆಯೇ ಉತ್ತರ ಪ್ರದೇಶ ಸರಕಾರ ಈ ನಿರ್ಬಂಧ ತೆಗೆದುಹಾಕಿದೆ. ಒಟ್ಟು ಪ್ರಕರಣ ಯೋಗಿ ಆದಿತ್ಯನಾಥ್ ಸರಕಾರವನ್ನು ತೀವ್ರ ಮುಖಭಂಗಕ್ಕೆ ಈಡುಮಾಡಿದೆ.