88ನೇ ಭಾರತೀಯ ವಾಯುಪಡೆ ದಿನ: ಹಿಂಡನ್ ವಾಯುನೆಲೆಯಲ್ಲಿ ಶಕ್ತಿ ಪ್ರದರ್ಶನ!!

08-10-20 12:14 pm       Headline Karnataka News Network   ದೇಶ - ವಿದೇಶ

ವಾಯುಪಡೆ 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು ಉತ್ತರ ಪ್ರದೇಶದ ಹಿಂಡನ್​ ವಾಯುನೆಲೆಯಲ್ಲಿ ವಿಶೇಷ ಪರೇಡ್​ ನಡೆಸುವ ಮೂಲಕ ಭಾರತೀಯ ಯೋಧರು ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ.

ನವದೆಹಲಿ, ಅಕ್ಟೋಬರ್ 07: ಭಾರತೀಯ ವಾಯುಸೇನೆಯು ಇಂದು 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರ ಪ್ರದೇಶದ ಘಾಜಿಯಬಾದ್​ನಲ್ಲಿರುವ ಹಿಂಡನ್​ ವಾಯುನೆಲೆಯಲ್ಲಿ ವಿಶೇಷ ಪರೇಡ್​ ಅನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​, ಸೇನಾ ಮುಖ್ಯಸ್ಥರಾದ ಜನರಲ್​ ಮನೋಜ್​ ಮುಕುಂದ್​ ನರಾವಣೆ ಮತ್ತು ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್​ ಕರಂಬಿರ್​ ಸಿಂಗ್​ ಅವರು ಭಾಗಿಯಾಗಿದ್ದರು. ವಾಯುಪಡೆಯ ಮುಖ್ಯಸ್ಥರಾದ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಹಿಂಡನ್ ವಾಯುನೆಲೆಯಲ್ಲಿ 88ನೇ ಭಾರತೀಯ ವಾಯುಪಡೆ ದಿನದ ಮೆರವಣಿಗೆಯನ್ನು ಪರಿಶೀಲಿಸಿದರು.

ಇನ್ನು ಈ ವರ್ಷದ ವಿಶೇಷ ಪರೇಡ್ ಪ್ರಮುಖ ಆಕರ್ಷಣೆ ರಫೇಲ್ ಯುದ್ಧ ವಿಮಾನ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಜೊತೆಗೆ  ಸುಕೋಯ್, ತೇಜಸ್, ಅಪಾಚೆ, ಮಿಗ್ ಸೇರಿ ಅನೇಕ ಯುದ್ಧ ವಿಮಾನಗಳು ಶಕ್ತಿ ಪ್ರದರ್ಶನ ಮಾಡಲಿವೆ. ವಿಶೇಷ ಹೆಲಿಕಾಫ್ಟರ್​ಗಳು ಸಾಹಸ ಪ್ರದರ್ಶಿಸಲಿವೆ. ಒಟ್ಟಾರೆ 56 ಏರ್​ಕ್ರಾಫ್ಟ್​ಗಳು, 19 ಫೈಟರ್ ಜೆಟ್​ಗಳು, 19 ಹೆಲಿಕಾಫ್ಟರ್​ಗಳು ಈ ವರ್ಷದ ಪರೇಡ್​ನಲ್ಲಿ ಕಾಣಿಸಿಕೊಳ್ಳಲಿವೆ.

ಭಾರತೀಯ ವಾಯುಸೇನಾ ದಿನವನ್ನು 1932, ಅಕ್ಟೋಬರ್‌ 8 ರಂದು ಮೊದಲ ಬಾರಿ ಆಚರಿಸಲಾಯಿತು. ಇದಾದ ಬಳಿಕ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ. ನೆರೆ ದೇಶಗಳಾದ ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಡೆದ ಯುದ್ಧದಲ್ಲಿ ನಮ್ಮ ವಾಯುಪಡೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ವಾಯುಪಡೆಯು ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಷನ್‌ ವಿಜಯ್‌, ಆಪರೇಷನ್‌ ಮೇಘದೂತ್‌, ಆಪರೇಷನ್‌ ಕ್ಯಾಕ್ಟಸ್‌, ಆಪರೇಷನ್‌ ಪೂಮಲೈ, ಆಪರೇಷನ್‌ ರಾಹತ್‌ ಇತ್ಯಾದಿಗಳು ಅತ್ಯಂತ ಪ್ರಮುಖವಾಗಿವೆ