500 ರೂ. ನೀಡಿದ್ದ ಉಪಕಾರ ಸ್ಮರಣೆ, 30 ಲಕ್ಷ ರೂ. ಗುರು ದಕ್ಷಿಣೆಯಿತ್ತ ಶಿಷ್ಯ!!

08-10-20 06:18 pm       Headline Karnataka News Network   ದೇಶ - ವಿದೇಶ

500 ರೂಪಾಯಿ ನೀಡಿದ್ದನ್ನು ನೆನಪಲ್ಲಿ ಇಟ್ಟುಕೊಂಡಿದ್ದ ವೈದ್ಯನಾಥನ್, ಈಗ ಗುರುವಿಗೆ ಮರಳಿ ಕಾಣಿಕೆ ನೀಡಿದ್ದಾರೆ.

ನವದೆಹಲಿ, ಅಕ್ಟೋಬರ್ 08: ಶಾಲೆಯಲ್ಲಿ ಕಲಿಸಿದ ಗುರುಗುಳು ದೊಡ್ಡವರಾದ ಮೇಲೆ ಕೆಲವರಿಗೆ ಗುರುತು ಸಿಗುವುದೇ ಕಷ್ಟ. ಅಂಥದರಲ್ಲಿ ಇಲ್ಲೊಬ್ಬ ತಾನು ಶಾಲೆಯಲ್ಲಿ ಕಷ್ಟದಲ್ಲಿದ್ದಾಗ, 500 ರೂಪಾಯಿ ನೀಡಿ ಯಾವುದೋ ಇಂಟರ್ವ್ಯೂಗೆ ಕಳಿಸಿದ್ದ ಶಿಕ್ಷಕರನ್ನು ಸ್ಮರಿಸಿ, ಅವರಿಗೆ 30 ಲಕ್ಷ ರೂಪಾಯಿ ಗುರುದಕ್ಷಿಣೆ ನೀಡಿದ್ದಾನೆ.

ಐಡಿಎಫ್ ಸಿ ಬ್ಯಾಂಕಿನ ಎಂಡಿ ಮತ್ತು ಸಿಇಓ ಆಗಿರುವ ವಿ.ವೈದ್ಯನಾಥನ್ ಎಂಬವರೇ ಹೀಗೆ ದೊಡ್ಡ ಗಿಫ್ಟ್ ನೀಡಿ ಸುದ್ದಿಯಾದವರು. ಹೈಸ್ಕೂಲಿನಲ್ಲಿ ಗಣಿತ ಮೇಷ್ಟ್ರು ಆಗಿದ್ದ ಗುರುದಯಾಲ್ ಸ್ವರೂಪ್ ಸೈನಿ ಅವರನ್ನು ಗುರುತಿಸಿ ತನ್ನ 30 ಲಕ್ಷ ರೂಪಾಯಿ ಮೌಲ್ಯದ ಒಂದು ಲಕ್ಷ ಈಕ್ವಿಟಿ ಶೇರನ್ನು ಗುರುವಿನ ಖಾತೆಗೆ ವರ್ಗಾಯಿಸಿದ್ದಾರೆ. ತಾನು ಸಣ್ಣಂದಿನಲ್ಲಿ ಕಷ್ಟಪಟ್ಟಿದ್ದಾಗ 500 ರೂಪಾಯಿ ನೀಡಿದ್ದನ್ನು ನೆನಪಲ್ಲಿ ಇಟ್ಟುಕೊಂಡಿದ್ದ ವೈದ್ಯನಾಥನ್, ಈಗ ಗುರುವಿಗೆ ಮರಳಿ ಕಾಣಿಕೆ ನೀಡಿದ್ದಾರೆ.

ಆಗ್ರಾದಲ್ಲಿರುವ ಸೈನಿಯ ಖಾತೆಗೆ ಇಷ್ಟೊಂದು ದೊಡ್ಡ ಮೊತ್ತ ವರ್ಗಾಯಿಸಲ್ಪಟ್ಟಿರುವುದನ್ನು ಬ್ಯಾಂಕ್ ಅಧಿಕಾರಿಗಳು ಸೈನಿಗೆ ತಿಳಿಸಿದ್ದಾರೆ. ಈ ವಿಚಾರ ಫೇಸ್ಬುಕ್ ನಲ್ಲಿ ವೈರಲ್ ಆಗುತ್ತಿದ್ದಂತೆ ವೈದ್ಯನಾಥನ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅದ್ಭುತ, ಈ ಕಾಲದಲ್ಲಿ ಹೀಗೆ ಕಲಿಸಿದ ಗುರುವನ್ನು ನೆನಪಲ್ಲಿ ಇಟ್ಕೊಳ್ಳೋರು ಇದ್ದಾರೆ, ವೈದ್ಯನಾಥನ್ ದೊಡ್ಡ ಕಾಣಿಕೆ ನೀಡಿದ್ದಾರೆ ಎಂದು ನೆಟ್ಟಿಗರು ಶಹಭಾಷ್ ಹೇಳಿದ್ದಾರೆ. ನಿಜವಾದ ಗುರು- ಶಿಷ್ಯ ಸಂಬಂಧ ಎಂದರೆ ಇದು. ಈಗಿನ ಕಾಲದಲ್ಲಿ ಇಂಥ ಸಂಬಂಧ ಕಾಣಸಿಗುವುದು ತುಂಬ ವಿರಳ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು, ಹೆಚ್ಚಿನ ವಿದ್ಯಾರ್ಥಿಗಳಿಗೆ ಕಷ್ಟಕಾಲದಲ್ಲಿ ನೆರವಾಗುವ ಶಿಕ್ಷಕರು ಸಿಗುವುದಿಲ್ಲ. ಹಾಗೆಯೇ ಹೆಚ್ಚಿನ ವಿದ್ಯಾರ್ಥಿಗಳು ತಾವು ದೊಡ್ಡವರಾದ ಬಳಿಕ ಗುರುಗಳನ್ನು ನೆನಪಲ್ಲಿ ಇಟ್ಟುಕೊಳ್ಳುವುದೂ ಇಲ್ಲ ಎಂದಿದ್ದಾರೆ.