ವೃದ್ಧ ದಂಪತಿಯ ಕಣ್ಣೀರಿಗೆ ಮಿಡಿದ ಮನಸ್ಸುಗಳು ; ಬಾಬಾ ಕಾ ಡಾಬಾಗೆ ಹರಿದು ಬಂತು ಮಹಾಪೂರ !!

08-10-20 06:54 pm       Headline Karnataka News Network   ದೇಶ - ವಿದೇಶ

ಲಾಕ್ ಡೌನ್ ನಂತರದಲ್ಲಿ ಡಾಬಾಕ್ಕೆ ಜನರು ಬರದೇ ಇದ್ದುದರಿಂದ ತುತ್ತು ಅನ್ನಕ್ಕೂ ಪರದಾಡಿದ ಅಜ್ಜನ ಕಥೆ ಆಯಿತು ವೈರಲ್, ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೆರವಿನ ಹಸ್ತ ಚಾಚುತ್ತಿರುವ ದಾನಿಗಳು.

ನವ ದೆಹಲಿ, ಅಕ್ಟೋಬರ್ .08 : ಲಾಕ್ಡೌನ್ ನಿಂದಾಗಿ ಹೋಟೆಲ್​ ಉದ್ಯಮಕ್ಕೆ ಭಾರೀ ಪೆಟ್ಟುಬಿದ್ದಿದ್ದು, ಚಿಕ್ಕಪುಟ್ಟ ಡಾಬಾಗಳ ಮುಖಾಂತರ  ಸಾವಿರಾರು ಜನರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಹೋಟೆಲ್ ಗಳು ಅಕ್ಷರಶಃ ನಲುಗಿಹೋಗಿದೆ. 

ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದ ಕುಟುಂಬವೊಂದಕ್ಕೆ ಇದೀಗ ಸಾಮಾಜಿಕ ಜಾಲತಾಣದ ಮುಖಾಂತರ ನೆರವಿನ ಹಸ್ತ ಸಿಕ್ಕಿದೆ.
 
ಹೌದು. 80 ವರ್ಷದ ವೃದ್ಧ ದಂಪತಿ ದಕ್ಷಿಣ ದಿಲ್ಲಿಯ ಮಾಲವೀಯಾ ನಗರ್ ಪ್ರದೇಶದ ರಸ್ತೆ ಬದಿಯಲ್ಲಿ  ಬಾಬಾ ಕಾ  ಡಾಬಾ ಹೆಸರಿನಲ್ಲಿ ಹೊಟೇಲ್ ನಡೆಸುತ್ತಿದ್ದರು. ಆದರೆ ಕೊರೊನಾ ನಂತರದಲ್ಲಿ   ಡಾಬಾಕ್ಕೆ ಜನರು ಬರದೇ ಇದ್ದುದ್ದನ್ನು ಕಂಡ ದಂಪತಿಗೆ ದಿಕ್ಕೇ ತೋಚದಂತಾಗಿತ್ತು. ಡಾಬಾ ಬಂದ್​ ಆಗಿದ್ದರಿಂದ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ದೆಹಲಿಯಲ್ಲಿ ಇನ್ನೂ ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಗೆ ಬರದ ಹಿನ್ನೆಲೆಯಲ್ಲಿ ಇವರ ಗೋಳು ಕೇಳುವವರೇ ಇರಲಿಲ್ಲ. 

ಇದರಿಂದ  ತೀವ್ರ ತೊಂದರೆಗೊಳಗಾದ ವೃದ್ಧ, ಕ್ಯಾಮರಾ ಮುಂದೆ ಕಣ್ಣೀರಿಟ್ಟಿದ್ದರು. ಈ ವಿಡಿಯೋವನ್ನು ವಸುಂಧರಾ ಶರ್ಮ ಎನ್ನುವವರು  ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಬದುಕು ಹೇಗೆ ಮೂರಾಬಟ್ಟೆಯಾಗಿದೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದಂಪತಿಯ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ  ಅನೇಕರು ಅಜ್ಜನ ಡಾಬಾಕ್ಕೆ ಹೋಗಿ ಊಟ ಮಾಡುತ್ತಿದ್ದಾರೆ.

ಬಾಬಾ ಕಾ ಡಾಬಾ ಎಂಬ ಹೆಸರಿನ ಈ ಟ್ವಿಟರ್​ ಅದೆಷ್ಟು ಮನಕ್ಕೆ ನಾಟಿದೆ ಎಂದರೆ ಬಾಲಿವುಡ್​ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕರಿಂದ ಸಹಾಯದ ನೆರವೇ ಹರಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಟಾಪ್​ ಟ್ರೆಂಡ್​ ಆಗಿರುವ ಈ ಟ್ವಿಟರ್​ ಸಾವಿರಾರು ಮನಸ್ಸನ್ನು ಗೆದ್ದುಬಿಟ್ಟಿದೆ.

ಬಾಲಿವುಡ್​ ತಾರೆಯರಾದ ರವೀನಾ ಟಂಡನ್​, ರಣದೀಪ್​ ಹೂಡಾ, ಸ್ವರಾ ಭಾಸ್ಕರ್​, ಗೌರವ್​ ವಾಸನ್​, ರವಿಚಂದ್ರ ಅಶ್ವಿನ್​, ಸೋನಂ ಕಪೂರ್​ ಸೇರಿದಂತೆ ಹಲವಾರು ಮಂದಿ ನೆರವಿಗೆ ಧಾವಿಸಿದ್ದಾರೆ. ಆಮ್​ ಆದ್ಮಿ ಪಕ್ಷದ ಶಾಸಕ ಸೋಮನಾಥ ಭಾರತಿ ಅವರೂ ಖುದ್ದು ಡಾಬಾಕ್ಕೆ ಭೇಟಿಕೊಟ್ಟು ಸಹಾಯದ ಭರವಸೆ ನೀಡಿದ್ದಾರೆ.