ಲಿಬಿಯಾದಲ್ಲಿ ಏಳು ಮಂದಿ ಭಾರತೀಯ ಪ್ರಜೆಗಳ ಅಪಹರಣ, ತಿಂಗಳ ಬಳಿಕ ಬೆಳಕಿಗೆ !!

09-10-20 10:26 am       Headline Karnataka News Network   ದೇಶ - ವಿದೇಶ

ಕಳೆದ ಸೆಪ್ಟೆಂಬರ್ 14 ರಂದು ಭಾರತಕ್ಕೆ ಬರಬೇಕಿದ್ದ ಏಳು ಮಂದಿ ಭಾರತೀಯ ಪ್ರಜೆಗಳನ್ನು ಆಫ್ರಿಕನ್ ದೇಶದ ಲಿಬಿಯಾದಲ್ಲಿ ಅಪಹರಿಸಿದ್ದಾರೆ.

ನವದೆಹಲಿ, ಅಕ್ಟೋಬರ್.09 : ಏಳು ಮಂದಿ ಭಾರತೀಯ ಪ್ರಜೆಗಳನ್ನು ಆಫ್ರಿಕನ್ ದೇಶದ ಲಿಬಿಯಾದಲ್ಲಿ ಅಪಹರಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಪಹರಣ ಆಗಿರುವುದನ್ನು ತಿಂಗಳ ಬಳಿಕ ಭಾರತೀಯ ವಿದೇಶಾಂಗ ಇಲಾಖೆ ದೃಢಪಡಿಸಿದೆ. 

ಆಂಧ್ರ ಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ ಏಳು ಮಂದಿ ಕಳೆದ ತಿಂಗಳು ಅಪಹರಣಕ್ಕೆ ಒಳಗಾಗಿದ್ದರು. ಈ ಕುರಿತು ಭಾರತ ಸರ್ಕಾರ ಲಿಬಿಯಾ ಸರಕಾರದ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. 

ಕಳೆದ ಸೆಪ್ಟೆಂಬರ್ 14 ರಂದು ಭಾರತಕ್ಕೆ ಬರುವುದಕ್ಕಾಗಿ ಏಳು ಮಂದಿ ಟ್ರಿಪೊಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ, ಅಶ್ವೆರಿಫ್ ಎಂಬ ಸ್ಥಳದಲ್ಲಿ ಭಾರತೀಯ ಪ್ರಜೆಗಳನ್ನು ಅಪಹರಿಸಲಾಗಿದೆ. 

ಭಾರತೀಯ ಪ್ರಜೆಗಳು ನಿರ್ಮಾಣ ಮತ್ತು ತೈಲ ಪೂರೈಕೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅಪಹರಣಕ್ಕೀಡಾದ ಯುವಕರ ಕುಟುಂಬ ಸದಸ್ಯರು ಮಾಹಿತಿ ತಿಳಿದು ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿದ್ದರು. ಲಿಬಿಯಾ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ, ಶೀಘ್ರದಲ್ಲಿ ಭಾರತೀಯರ ಬಿಡುಗಡೆಗೆ ಶ್ರಮಿಸುತ್ತೇವೆ ಎಂದು ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.