ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ತರಲು ಯತ್ನ ; ಪಾಕ್ ಯತ್ನ ವಿಫಲ!

10-10-20 04:32 pm       Headline Karnataka News Network   ದೇಶ - ವಿದೇಶ

ಪಾಕಿಸ್ತಾನ ಸೇನಾ ನೆರವಿನಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುವ ಪಾಕ್​ ಉಗ್ರರ ಪ್ರಯತ್ನವನ್ನು ಭಾರತೀಯ ಸೇನೆ ದಕ್ಷಿಣ ಕಾಶ್ಮೀರದ ಕೀರನ್​ ವಲಯದಲ್ಲಿ ಶನಿವಾರ ವಿಫಲಗೊಳಿಸಿದೆ.

ಶ್ರೀನಗರ, ಅಕ್ಟೋಬರ್.10 : ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದ ಮೂಲಕ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡಲು ಯತ್ನಿಸಿದ್ದು, ಭಾರತೀಯ ಯೋಧರು ಅದನ್ನು ವಿಫಲಗೊಳಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ ಮೂಲಕ ಶಸ್ತ್ರಾಸ್ತ್ರಗಳನ್ನ ಸ್ಮಗ್ಲಿಂಗ್ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದ್ದು, ಉತ್ತರ ಕಾಶ್ಮೀರದ ಕೇರನ್​ ಸೆಕ್ಟರ್​​ನಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಯೋಧರು ಉಗ್ರರ ಕೃತ್ಯವನ್ನ ತಡೆದಿದ್ದಾರೆ.

ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಗಡಿ ನಿಯಂತ್ರಣ ರೇಖೆಯ ಬಳಿ ಅಳವಡಿಸಲಾಗಿರುವ ಕಣ್ಗಾವಲು ಯಂತ್ರವು ಕಿಶನ್​ ಗಂಗಾ ನದಿ ದಡದಲ್ಲಿ ಕೆಲವರ ಚಟುವಟಿಕೆಯನ್ನು ಪತ್ತೆ ಹಚ್ಚಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಯತ್ನವನ್ನು ವಿಫಲಗೊಳಿಸಿದೆ.

ಸ್ಥಳಕ್ಕೆ ತೆರಳಿದ ಭದ್ರತಾ ಸಿಬ್ಬಂದಿ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ದು, ನಾಲ್ಕು ಎಕೆ 47 ರೈಫಲ್​​​ಗಳು, 8 ಮ್ಯಾಗಜಿನ್, 240 ಎಕೆ ರೈಫಲ್​​ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಉಗ್ರರ ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ.