ಗೃಹಬಂಧನದಲ್ಲಿದ್ದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ರಿಲೀಸ್- ಕೇಂದ್ರದ ವಿರುದ್ಧ ವಾಗ್ದಾಳಿ!!

14-10-20 11:16 am       Headline Karnataka News Network   ದೇಶ - ವಿದೇಶ

ಕಳೆದ ಆಗಸ್ಟ್​ನಿಂದ ಗೃಹಬಂಧನದಲ್ಲಿದ್ದ ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೆ ಹಾಗೂ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಕೊನೆಗೂ ಬಿಡುಗಡೆಗೊಂಡಿದ್ದಾರೆ.

ಶ್ರೀನಗರ, ಅಕ್ಟೋಬರ್. 14 : ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನದಲ್ಲಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ರಾಜ್ಯ ಸರ್ಕಾರ ಮಂಗಳವಾರ  ಬಿಡುಗಡೆ ಮಾಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಗೃಹ ಬಂಧನಕ್ಕೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬರೊಬ್ಬರಿ 14 ತಿಂಗಳ ಬಳಿಕ  ಬಿಡುಗಡೆಯಾಗಿದ್ದಾರೆ. ಈ ಮೂಲಕ ಕಣಿವೆಯ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಗೃಹ ಬಂಧನದಿಂದ ಮುಕ್ತಿ ಪಡೆದಂತಾಗಿದೆ. 

2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಆರ್ಟಿಕಲ್ 370 ತೆಗೆಯುವ ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಮುಫ್ತಿ ಅವರನ್ನ ಮುನ್ನೆಚ್ಚರಿಕಾ  ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ವರ್ಷದ ಫೆಬ್ರವರಿ 5ರಂದು ಸಾರ್ವಜನಿಕ ಸುರಕ್ಷತೆ ಕಾಯ್ದೆ ಪಿಎಸ್​ಎ ಅಡಿಯಲ್ಲಿ ಅವರ ಬಂಧನದ ಅವಧಿಯನ್ನು ಮುಂದುವರಿಸಲಾಗಿತ್ತು. ಅವರ ಬಂಧನ ಅವಧಿಯನ್ನು ಇದುವರೆಗೂ ವಿಸ್ತರಿಸುತ್ತಾ ಬರಲಾಗಿತ್ತು. ಮೆಹಬೂಬ ಅವರ ಮಗಳು ಇಲ್ತಿಜಾ ಮುಫ್ತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಮೆಹಬೂಬ ಮುಫ್ತಿ ಬಿಡುಗಡೆಗೆ ಗಡುವು ನಿಗದಿಪಡಿಸಿತ್ತು.

ಇನ್ನು ಬಿಡುಗಡೆಯಾಗುತ್ತಿದ್ದಂತೆ ಕಪ್ಪು ಆಡಿಯೋ ಮೂಲಕ ಕೇಂದ್ರ ಸರ್ಕಾರದ ವಿರುದ್ಧ  ಮೆಹಬೂಬಾ ಕಿಡಿ ಕಾರಿದ್ದು, ಟ್ವಿಟರ್​ನಲ್ಲಿಯೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, ಒಂದೂ ವರ್ಷಕ್ಕೂ ಹೆಚ್ಚು ಕಾಲ ಅಂದರೆ 14 ತಿಂಗಳ ಬಳಿಕ ಬಿಡುಗಡೆ ಹೊಂದಿದ್ದೇನೆ. 370ನೇ ವಿಧಿ ರದ್ದುಗೊಳಿಸಿದ ಕೇಂದ್ರದ ಕ್ರೂರ ನಿರ್ಧಾರದ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿದ್ದೇನೆ. ಸರ್ಕಾರ ವಿಶೇಷ ಸ್ಥಾನಮಾನವನ್ನು ಮರಳಿಸಬೇಕು ಹಾಗೂ ದೇಶದ ಹಲವು ಭಾಗಗಳಲ್ಲಿ ಜೈಲಿನಲ್ಲಿ ಬಳಲುತ್ತಿರುವವರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ನಾವೆಲ್ಲರೂ ಹೋರಾಡಬೇಕಿದೆ ಎಂದಿದ್ದಾರೆ.