ಭಾರತದ ಆತ್ಮವೇ ಶ್ರೀರಾಮ, ರಾಮನ ಬಿಟ್ಟು ಈ ದೇಶಕ್ಕೆ ಅಸ್ಮಿತೆಯೇ ಇಲ್ಲ: ಪ್ರಧಾನಿ 

05-08-20 09:54 am       Headline Karnataka News Network   ದೇಶ - ವಿದೇಶ

ನೂರಾರು ವರ್ಷಗಳಿಂದ ಈ ದೇಶದ ಜನ ಕಾದಿದ್ದ ದಿನ ಕೊನೆಗೂ ಬಂದಿದೆ. ಇವತ್ತಿನ ದಿನ ಸುದೀರ್ಘ ಕಾಲದ ತ್ಯಾಗ, ಬಲಿದಾನ, ಸಂಕಲ್ಪದ ಪ್ರತೀಕ.  ಕೋಟ್ಯಂತರ ಜನರು ಕಂಡ ಕನಸು ನನಸಾದ ದಿನ.  ಮಂದಿರಕ್ಕಾಗಿ ಬಲಿದಾನಗೈದ, ಶ್ರಮಸೇವೆಗೈದ ಕೋಟ್ಯಂತರ ಮಂದಿಗೆ ನಾನು ನಮಿಸುತ್ತೇನೆ ಎಂದು ಹೇಳಿದರು.

ಅಯೋಧ್ಯೆ, ಆಗಸ್ಟ್ 05: ಕೋಟಿ ಕೋಟಿ ಜನರ ಕನಸು ಸಾಕಾರಗೊಂಡಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕೊನೆಗೂ ಶ್ರೀರಾಮನ ಭವ್ಯ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದಾರೆ. 

ಸಾಧು ಸಂತರ ಸಾರಥ್ಯದಲ್ಲಿ ದೇಗುಲದ ಪದತಳದಲ್ಲಿ ಭೂಮಿಪೂಜೆ ನೆರವೇರಿಸಿದ ಪ್ರಧಾನಿ ಮೋದಿ ಬಳಿಕ ಅಲಂಕೃತ ವೇದಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.

"ಜೈ ಸಿಯಾರಾಮ್ " ಎನ್ನುತ್ತಲೇ ಭಾಷಣ ಆರಂಭಿಸಿದ ಮೋದಿ, ಶ್ರೀರಾಮನ ಈ ದೇವಾಲಯ ಈ ದೇಶದ ಸಂಸ್ಕ್ರತಿಯ ಪ್ರತೀಕ ಆಗಲಿದೆ. ಕೋಟ್ಯಂತರ ಜನರ ಸಂಕಲ್ಪದ ಪ್ರತೀಕ ಆಗಲಿದೆ ಎಂದು ಭರವಸೆ ನೀಡಿದರು. 

ನೂರಾರು ವರ್ಷಗಳಿಂದ ಈ ದೇಶದ ಜನ ಕಾದಿದ್ದ ದಿನ ಕೊನೆಗೂ ಬಂದಿದೆ. ಇವತ್ತಿನ ದಿನ ಸುದೀರ್ಘ ಕಾಲದ ತ್ಯಾಗ, ಬಲಿದಾನ, ಸಂಕಲ್ಪದ ಪ್ರತೀಕ.  ಕೋಟ್ಯಂತರ ಜನರು ಕಂಡ ಕನಸು ನನಸಾದ ದಿನ.  ಮಂದಿರಕ್ಕಾಗಿ ಬಲಿದಾನಗೈದ, ಶ್ರಮಸೇವೆಗೈದ ಕೋಟ್ಯಂತರ ಮಂದಿಗೆ ನಾನು ನಮಿಸುತ್ತೇನೆ ಎಂದು ಹೇಳಿದರು.

" ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ಭವ್ಯದೇಗುಲಕ್ಕೆ ಶಿಲಾನ್ಯಾಸ ಆಗಿದೆ. ರಾಮನ ಆದರ್ಶ ಕಾಯಲು ರಾಮನ ಬಂಟ ಹನುಮಂತ ಈಗಲೂ ನಮ್ಮೊಳಗಿದ್ದಾನೆ..  ಇವತ್ತಿನ ದಿನ ಸಾಕಾರಗೊಂಡಿದ್ದು ಸತ್ಯ, ಅಹಿಂಸೆ, ನ್ಯಾಯಪ್ರಿಯ ಜನತೆಯ ಅನುಪಮ ಆದರ್ಶದಿಂದಾಗಿದೆ. ರಾಮನ ಕಾರ್ಯದಲ್ಲಿ ಯಾವುದು ಮರ್ಯಾದಸ್ಥ ಕೆಲಸವಾಗಿತ್ತೋ ಅದನ್ನು ನಾವು ಮಾಡಿದ್ದೇವೆ. ಮಂದಿರದ ಕಾರ್ಯವನ್ನು ಶಾಂತಿಯುತವಾಗಿ ನೆರವೇರಿಸಿದ್ದು ನಮ್ಮ ಪುಣ್ಯ..

"ದ್ವಾಪರ ಯುಗದಲ್ಲಿ ಗೋವರ್ಧನ ಗಿರಿ ಎತ್ತಲು ಶ್ರೀಕೃಷ್ಣ ಬಂದಿದ್ದು ಒಂದು ನಿಮಿತ್ತಕ್ಕಾಗಿ. ಹಿಂದವೀ ಸಾಮ್ರಾಜ್ಯ ಸ್ಥಾಪಿಸಲು ಶಿವಾಜಿ ಬಂದಿದ್ದೂ ನಿಮಿತ್ತ ಮಾತ್ರ. ಈಗ ನಾವು ರಾಮನ ದೇಗುಲ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಒಂದು ನಿಮಿತ್ತ ಮಾತ್ರ. ಅದು ರಾಮನ ಕಾರ್ಯ. ರಾಮನ ಚಿತ್ತವೇ ಆಗಿದೆ ಎಂದು ಮೋದಿ ಅಭಿಪ್ರಾಯ ಪಟ್ಟರು. 

ರಾಮ ಸಾಮಾಜಿಕ ಸಾಮರಸ್ಯಕ್ಕಾಗಿ ಗುರು ವಶಿಷ್ಟರೊಂದಿಗೆ ಸೇರಿ ಶಾಸನ ರಚಿಸಿದ್ದ. ದೀನರಿಗಾಗಿ ಸೇವೆ ಮಾಡುವುದೇ ರಾಮನ ಕಾರ್ಯ ಆಗಿತ್ತು. ಭರತ ಭೂಮಿಯ ಆತ್ಮವೇ ರಾಮನಾಗಿದ್ದ. ಭಾರತದ ಭವ್ಯ ಪರಂಪರೆಯೇ ರಾಮಚಂದ್ರ ಪ್ರಭುವಿನದ್ದು. ಸ್ವಾತಂತ್ರ್ಯ ಕಾಲದಲ್ಲಿ ಬಾಪೂಜಿಯವರಿಗೆ ಶಕ್ತಿ ನೀಡಿದ್ದು ಶ್ರೀರಾಮ. ರಾಮನ ಬಿಟ್ಟು ಈ ದೇಶಕ್ಕೆ ಅಸ್ಮಿತೆಯೇ ಇಲ್ಲ.. ರಾಮನ ಚರಿತ್ರೆ ಈ ದೇಶದಲ್ಲಿ ನೂರಾರು ರಾಮಾಯಣ ಸೃಷ್ಟಿಗೆ ಕಾರಣವಾಗಿದೆ. 

ಶ್ರೀಲಂಕಾದಲ್ಲಿ ರಾಮನ ಕಥೆ ಪ್ರತಿಯೊಬ್ಬನ ನರ ನಾಡಿಯಲ್ಲಿದೆ. ನೇಪಾಳ, ಇಂಡೋನೇಷ್ಯಾದಲ್ಲಿ ರಾಮನ ಹೆಸರು ರಾರಾಜಿಸುತ್ತದೆ. ಈ ದೇಶದಲ್ಲಿ ರಾಮನ ಪೂಜೆ ಇಲ್ಲದ ಗ್ರಾಮವೇ ಇಲ್ಲ. ರಾಮನ ಹೆಸರು ಹೇಳದ ಜನರೇ ಇಲ್ಲ. ಶ್ರೀರಾಮನೇ ಈ ದೇಶದ ಆತ್ಮ. ಅಯೋಧ್ಯೆಯ ರಾಮ ದೇಗುಲ ಯುಗ ಯುಗಾಂತರಗಳಲ್ಲಿ ರಾರಾಜಿಸಲಿದೆ. ಇಡೀ ಜಗತ್ತಿನಲ್ಲಿ ಹೊಸ ಮನ್ವಂತರ ಸೃಷ್ಟಿಸಲಿದೆ ಎಂದು ಅವರು ಹೇಳಿದರು. 

ರಾಮನ ಜೀವನ ಗಾಂಧೀಜಿಗೆ ರಾಮರಾಜ್ಯದ ಕಲ್ಪನೆಗೆ ಪ್ರೇರಣೆಯಾಗಿತ್ತು. ರಾಮನ ಹೆಸರು ಕಾಲದ ಜೊತೆ ಮುಂದೆ ಸಾಗಲು ನಮಗೆ ಪ್ರೇರಣೆ ನೀಡುತ್ತದೆ. ರಾಮನ ಆದರ್ಶದಲ್ಲಿ ಮುನ್ನಡೆದು ಭಾರತ ದೇಶ ಮುಂದೆ ಸಾಗಬೇಕಿದೆ.  ಕೊರೊನಾ ಬಾಧೆ ತಪ್ಪಿಸಲು ರಾಮನ ಆದರ್ಶ ಪ್ರೇರಣೆಯಾಗಲಿ. ಮಾತೆ ಸೀತೆ, ಪ್ರಭು ಶ್ರೀರಾಮನ ಕೃಪೆ ನಮಗೆಲ್ಲ ಸಿಗಲಿ ಎಂದು ಹೇಳಿ ಮೋದಿ ಮಾತು ಮುಗಿಸಿದರು.