ಮಹಾಮಳೆಗೆ ಮುಂಬೈ ತತ್ತರ, ಹಲವರು ನಾಪತ್ತೆ ; ಮನೆಯಿಂದ ಹೊರಬರದಿರಲು ಸೂಚನೆ

05-08-20 06:23 pm       Headline Karnataka News Network   ದೇಶ - ವಿದೇಶ

ಮಹಾರಾಷ್ಟ್ರ ಕರಾವಳಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಮುಂಬೈ ಮತ್ತು ಪುಣೆ ಮಳೆ, ಬಿರುಗಾಳಿಗೆ ಅಕ್ಷರಶಃ ನಲುಗಿದೆ. 2005 ರ ಬಳಿಕ ಇದೇ‌ ಮೊದಲ ಬಾರಿಗೆ ಈ ಪರಿ ಮಳೆಯಾಗುತ್ತಿದೆ ಎನ್ನಲಾಗುತ್ತಿದೆ.

ಮುಂಬೈ, ಆಗಸ್ಟ್ 5: ಮುಂಬೈ ಮಹಾನಗರ ಭಾರೀ ಮಳೆಗೆ ತತ್ತರಿಸಿದೆ. ಮಹಾರಾಷ್ಟ್ರ ಕರಾವಳಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಮುಂಬೈ ಮತ್ತು ಪುಣೆ ಮಳೆ, ಬಿರುಗಾಳಿಗೆ ಅಕ್ಷರಶಃ ನಲುಗಿದೆ. 

2005 ರ ಬಳಿಕ ಇದೇ‌ ಮೊದಲ ಬಾರಿಗೆ ಈ ಪರಿ ಮಳೆಯಾಗುತ್ತಿದೆ ಎನ್ನಲಾಗುತ್ತಿದೆ. ಇಂದು ರಾತ್ರಿ ಇನ್ನಷ್ಟು ಮಳೆ ಮತ್ತು ಬಿರುಗಾಳಿ ಎದುರಾಗುವ ಬಗ್ಗೆ ಸೂಚನೆ ನೀಡಲಾಗಿದೆ. ಗಂಟೆಗೆ 107 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಅಲ್ಲದೆ, ಗಂಟೆಗೆ ಮೂರರಿಂದ ನಾಲ್ಕು ಸೆಂಟಿ ಮೀಟರಿನಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಯಾರು ಕೂಡ ಮನೆಯಿಂದ ಹೊರಬರಬೇಡಿ ಎಂದು ಮುಂಬೈ ಪೊಲೀಸ್ ಜನರಲ್ಲಿ ಮನವಿ ಮಾಡಿದೆ.

ಮುಂಬೈ ಮಹಾನಗರದ ನರನಾಡಿಯಂತಿದ್ದ ರೈಲು ಯಾನವನ್ನು ರದ್ದು ಪಡಿಸಲಾಗಿದ್ದರೆ, ಬಸ್, ವಿಮಾನ ಸಂಚಾರವೂ ಸ್ತಬ್ಧವಾಗಿದೆ. ಮುಂಬೈ ಏರ್ಪೋರ್ಟ್ ನಲ್ಲಿ ನಿಲ್ಲಿಸಲಾಗಿದ್ದ ಮೂರು ಕ್ರೇನ್ ಗಳು ಬಿರುಗಾಳಿಗೆ ಉರುಳಿ ಬಿದ್ದಿದ್ದು ಸಾವು ನೋವಿನ ಬಗ್ಗೆ ತಿಳಿದುಬಂದಿಲ್ಲ. ಇನ್ನು ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಆವೃತ ಆಗಿದ್ದು ಸಂತ್ರಸ್ತರ ರಕ್ಷಣೆಗೆ ಎನ್ ಡಿ ಆರ್ ಎಫ್ ಮುಂದಾಗಿದೆ. 

ಇದೇ ವೇಳೆ, ಮುಂಬೈನ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಪ್ರಧಾನಿ ಮೋದಿ, ಸಿಎಂ ಉದ್ಧವ್ ಠಾಕ್ರೆಗೆ ಕರೆ ಮಾಡಿದ್ದಾರೆ. ರಕ್ಷಣಾ ಪಡೆ ಸನ್ನದ್ದ ಇರಿಸಲು ಸೂಚಿಸಿದ್ದು ಹೆಚ್ಚಿನ ನೆರವಿಗೆ ಸಿದ್ಧ ಇರುವುದಾಗಿ ಮೋದಿ ಹೇಳಿದ್ದಾರೆ. 
ಮಹಾನಗರ ವ್ಯಾಪ್ತಿಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇದೇ ವೇಳೆ 35 ವರ್ಷದ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಹಿಡಿದು ರಸ್ತೆ ದಾಟುತ್ತಿದ್ದಾಗ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ರಾತ್ರಿ ವೇಳೆ ಬಿರುಗಾಳಿ ಮತ್ತು ಭಾರೀ ಮಳೆಯಾಗುವ ಕಾರಣ ಯಾರೂ ಮನೆಯಿಂದ ಹೊರಬರದಂತೆ ಸಚಿವ ಆದಿತ್ಯ ಠಾಕ್ರೆ ಮನವಿ ಮಾಡಿದ್ದಾರೆ. ವಿಶೇಷವಾಗಿ ಮಾಧ್ಯಮ ಮಂದಿಯೂ ತಮ್ಮ ಕ್ಷೇಮವನ್ನು ನೋಡಿಕೊಂಡು ಮುಂದುವರೆಯಿರಿ. ಅಪಾಯ ಇರುವ ಕಡೆ ತೆರಳದಿರಿ ಎಂದು ಟ್ವೀಟ್ ಮಾಡಿ ಕೇಳಿಕೊಂಡಿದ್ದಾರೆ. ಮುನ್ಸೂಚನೆ ಪ್ರಕಾರ, ಇಂದು ರಾತ್ರಿಯಿಂದ ಬೆಳಗ್ಗಿನ ವರೆಗೆ ಮುಂಬೈನ ಜನ ಕಂಡು ಕೇಳರಿಯದ ರೀತಿ ಮಳೆಯಾಗಲಿದೆ ಎನ್ನಲಾಗ್ತಿದೆ. ಸೋಮವಾರ ಬೆಳಗ್ಗಿನಿಂದ ದಿಢೀರ್ ಆಗಿ ಮಳೆ ಸುರಿಯತೊಡಗಿದ್ದು ಚಂಡಮಾರುತ ಅಪ್ಪಳಿಸಿದ ರೀತಿ ಮಳೆ ಗಾಳಿ ಮುಂಬೈಗೆ ಮುಂಬೈಯನ್ನೇ ತತ್ತರಿಸುವಂತೆ ಮಾಡಿದೆ.. ತುರ್ತು ಅಗತ್ಯಕ್ಕಾಗಿ ಎನ್ ಡಿಆರ್ ಎಫ್ ತಂಡಗಳನ್ನು ಆಸುಪಾಸಿನ ರಾಯಗಢ, ಸಾಂಗ್ಲಿ , ಸೋಲಾಪುರ ಹೀಗೆ ಅಲ್ಲಲ್ಲಿ ಹೆಚ್ಚುವರಿ ಆಗಿ ನಿಯೋಜನೆ ಮಾಡಲಾಗಿದೆ.