ಅಹ್ಮದಾಬಾದ್​ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿಅವಘಡ; 8 ರೋಗಿಗಳು ಆಹುತಿ

06-08-20 04:18 am       Headline Karnataka News Network   ದೇಶ - ವಿದೇಶ

ಅಹ್ಮದಾಬಾದ್​ನ ಕೋವಿಡ್-19 ಖಾಸಗಿ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಐಸಿಯು ವಾರ್ಡ್​ನಲ್ಲಿದ್ದ ಎಂಟು ಮಂದಿ ರೋಗಿಗಳು ಬಲಿಯಾಗಿದ್ದಾರೆ.

ಅಹ್ಮದಾಬಾದ್(ಆ. 06): ಅಹ್ಮದಾಬಾದ್​ನ ಕೋವಿಡ್-19 ಖಾಸಗಿ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಐಸಿಯು ವಾರ್ಡ್​ನಲ್ಲಿದ್ದ ಎಂಟು ಮಂದಿ ರೋಗಿಗಳು ಬಲಿಯಾಗಿದ್ದಾರೆ. ಅಹ್ಮದಾಬಾದ್​ನ ನವರಂಗ್​ಪುರ ಪ್ರದೇಶದಲ್ಲಿರುವ ಶ್ರೇಯ್ ಆಸ್ಪತ್ರೆಯಲ್ಲಿ ರಾತ್ರಿ 2:30ರ ಸುಮಾರಿಗೆ ಸಂಭವಿಸಿದ ಈ ದುರ್ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವೆನ್ನಲಾಗಿದೆ.

ಸಾವನ್ನಪ್ಪಿದ ಎಂಟು ಮಂದಿ ಪೈಕಿ ಮೂವರು ಮಹಿಳೆಯರು ಸೇರಿದ್ದಾರೆ. ಈ ದುರಂತ ಸಂಭವಿಸಿದಾಗ ಈ ಆಸ್ಪತ್ರೆಯಲ್ಲಿ 35 ರೋಗಿಗಳಿದ್ದರೆನ್ನಲಾಗಿದೆ. ಉಳಿದ ರೋಗಿಗಳು, ವೈದ್ಯರು ಮತ್ತು ಸಿಬ್ಬಂದಿಗೆ ಹಾನಿಯಾಗಿಲ್ಲ. ಉಳಿದ ರೋಗಿಗಳನ್ನು ನಗರದ ಬೇರೊಂದು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೇ ವೇಳೆ, ಆಸ್ಪತ್ರೆಯಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಆದಷ್ಟೂ ಬೇಗ ಚೇತರಿಕೆ ಕಾಣಲಿ ಎಂದು ಹಾರೈಸಿರುವ ಅವರು ಅಹ್ಮದಾಬಾದ್ ಜಿಲ್ಲಾಡಳಿತವು ಎಲ್ಲಾ ನೆರವು ಒದಗಿಸುತ್ತಿದೆ ಎಂದಿದ್ದಾರೆ.

 

ಹಾಗೆಯೇ, ಪ್ರತಿಯೊಬ್ಬ ಮೃತರ ಕುಟುಂಬಕ್ಕೂ 2 ಲಕ್ಷ ರೂ ಪರಿಹಾರವನ್ನೂ ಪ್ರಧಾನಿಗಳು ಘೋಷಿಸಿದ್ಧಾರೆ. ಪ್ರಧಾನಮಂತ್ರಿ ವಿಪತ್ತು ನಿಧಿಯಿಂದ ಈ ಹಣವನ್ನು ನೀಡಲಾಗುತ್ತಿದೆ. ಹಾಗೆಯೇ, ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ಪ್ರಕಟಿಸಿದ್ದಾರೆ.