ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ- ಆರ್‌ಬಿಐ

06-08-20 07:12 am       Headline Karnataka News Network   ದೇಶ - ವಿದೇಶ

ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಪಾಲನೆ ಮಾಡಲು ಆರ್​ಬಿಐ ನಿರ್ಧರಿಸಿದೆ.

ನವದೆಹಲಿ(ಆ. 06): ಆರ್ಥಿಕ ಅಧಃಪತನವನ್ನು ತಪ್ಪಿಸಲು ರೆಪೋ ದರ ಇನ್ನಷ್ಟು ಇಳಿಯಬಹುದು ಎಂಬ ಉದ್ಯಮಪಂಡಿತರ ನಿರೀಕ್ಷೆ ಇವತ್ತು ಹುಸಿಯಾಗಿದೆ. ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಪಾಲನೆ ಮಾಡಲು ಆರ್​ಬಿಐ ನಿರ್ಧರಿಸಿದೆ.

ಹಣಕಾಸು ಚಲನೆಗೆ ಪ್ರಮುಖ ಪಾತ್ರ ವಹಿಸುವ ರೆಪೋ ದರ ಶೇ. 4ರಲ್ಲಿ ಮುಂದುವರಿಯಲಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ಬಳಿಕ ಮಾಧ್ಯಮಗಳಿಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಚಟುವಟಿಕೆ ಬಹಳ ಸೂಕ್ಷ್ಮ ಸ್ಥಿತಿಯಲ್ಲೇ ಮುಂದುವರಿದಿದೆ. ಆದರೆ, ಜಾಗತಿಕ ಹಣಕಾಸು ಮಾರುಕಟ್ಟೆಗಳು ಆಶಾದಾಯಕವೆನಿಸಿವೆ ಎಂದು ಆರ್​ಬಿಐ ಗವರ್ನರ್ ಹೇಳಿದ್ದಾರೆ.

ಈ ಬಾರಿಯ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಲು ನಿರ್ಧರಿಸಬಹುದು ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೆ. 75ರಷ್ಟು ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದರು. ಈ ತ್ರೈಮಾಸಿಕವಷ್ಟೇ ಅಲ್ಲ ಮುಂದಿನ ತ್ರೈಮಾಸಿಕದಲ್ಳೂ 25 ಬೇಸಿಸ್ ಪಾಯಿಂಟ್ ಇಳಿಕೆಯಾಗಿ ರೆಪೋ ದರ ಶೇ 3.5ಕ್ಕೆ ಇಳಿಕೆಯಾಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದರು. ಆದರೆ, ಎಂಪಿಸಿ ಸಭೆಯಲ್ಲಿ ಯಥಾಸ್ಥಿತಿ ಪಾಲನೆಯ ನಿರ್ಧಾರದೊಂದಿಗೆ ದೇಶದ ಅರ್ಥಶಾಸ್ತ್ರಜ್ಞರ ನಿರೀಕ್ಷೆ ಹುಸಿಯಾದಂತಾಗಿದೆ.