ಕಾಸರಗೋಡಿನಲ್ಲಿ ಅಲ್ ಖೈದಾ ಉಗ್ರರ ಸ್ಲೀಪರ್ ಸೆಲ್ ರಚಿಸುತ್ತಿದ್ದ ಶಾಬ್ ಶೇಖ್ ; ನಾಲ್ಕು ವರ್ಷಗಳಿಂದ ಕಟ್ಟಡ ಕಾರ್ಮಿಕನ ಸೋಗಿನಲ್ಲಿದ್ದ ಬಾಂಗ್ಲಾ ಉಗ್ರ ! 

23-12-24 05:23 pm       HK News Desk   ದೇಶ - ವಿದೇಶ

ಅಸ್ಸಾಂ ಸ್ಪೆಷಲ್‌ ಟಾಸ್ಕ್ ಫೋರ್ಸ್‌ ಮತ್ತು ಎನ್ಐಎ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಕಾಸರಗೋಡಿನ ಪಡನ್ನಕ್ಕಾಡ್‌ನಿಂದ ಬಂಧನಕ್ಕೊಳಗಾದ ಬಾಂಗ್ಲಾದೇಶ ಮೂಲದ ಎಂ.ಡಿ.ಶಾಬ್‌ ಶೇಖ್‌ ಅಲ್‌ ಖೈದಾ ಉಗ್ರರ ಪರವಾಗಿ ಸ್ಲೀಪರ್‌ ಸೆಲ್‌ ಸದಸ್ಯನಾಗಿ ಕಾರ್ಯಾಚರಿಸುತ್ತಿದ್ದ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.

ಕಾಸರಗೋಡು, ಡಿ.23: ಅಸ್ಸಾಂ ಸ್ಪೆಷಲ್‌ ಟಾಸ್ಕ್ ಫೋರ್ಸ್‌ ಮತ್ತು ಎನ್ಐಎ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಕಾಸರಗೋಡಿನ ಪಡನ್ನಕ್ಕಾಡ್‌ನಿಂದ ಬಂಧನಕ್ಕೊಳಗಾದ ಬಾಂಗ್ಲಾದೇಶ ಮೂಲದ ಎಂ.ಡಿ.ಶಾಬ್‌ ಶೇಖ್‌ ಅಲ್‌ ಖೈದಾ ಉಗ್ರರ ಪರವಾಗಿ ಸ್ಲೀಪರ್‌ ಸೆಲ್‌ ಸದಸ್ಯನಾಗಿ ಕಾರ್ಯಾಚರಿಸುತ್ತಿದ್ದ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ನಾಲ್ಕು ವರ್ಷಗಳಿಂದ ಕಾಸರಗೋಡಿನಲ್ಲಿ ಕಟ್ಟಡ ಕಾರ್ಮಿಕನ ಸೋಗಿನಲ್ಲಿ ಅಡಗಿಕೊಂಡಿದ್ದ ಶೇಖ್ ನನ್ನು ಮೂರು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. 
 
ಶಾಬ್ ಶೇಖ್ ಅಸ್ಸಾಂ ನಿವಾಸಿಯೆ‌ಂದು ಅಕ್ರಮವಾಗಿ ನಕಲಿ ಆಧಾರ್ ದಾಖಲೆಗಳನ್ನು ಮಾಡಿಕೊಂಡಿದ್ದ. ಅಸ್ಸಾಂನಲ್ಲಿ 2018ರಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಈತ ಬಾಂಗ್ಲಾ ದೇಶದಲ್ಲಿ ಉಗ್ರಗಾಮಿ ಸಂಘಟನೆಯಾದ ಅನ್ಸಾರುಲ್ಲಾ ಬಾಂಗ್ಲಾದ ಸಕ್ರಿಯ ಕಾರ್ಯಕರ್ತನೂ ಆಗಿದ್ದ ಎಂಬ ಮಾಹಿತಿಯನ್ನು ತನಿಖಾ ತಂಡ ಪತ್ತೆಹಚ್ಚಿದೆ. ಭಾರತದಲ್ಲಿ ಸ್ಲೀಪರ್ ಸೆಲ್‌ ರಚಿಸಿ, ಹಿಂದೂ ನಾಯಕರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಎಂಬ ಸಂಗತಿಯೂ ತನಿಖೆಯಲ್ಲಿ ಬಯಲಿಗೆ ಬಂದಿದೆ.

2018ರಿಂದಲೇ ಅಸ್ಸಾಂನಿಂದ ಕೇರಳಕ್ಕೆ ಬಂದು ಕಾಸರಗೋಡಿನಲ್ಲಿ ನೆಲೆಸಿದ್ದ ಎನ್ನಲಾಗುತ್ತಿದೆ. ಅಸ್ಸಾಂನಲ್ಲಿ ಹಲವು ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಕಟ್ಟಡ ನಿರ್ಮಾಣ ಕಾರ್ಮಿಕನೆಂದು ನಕಲಿ ದಾಖಲೆಯೊಂದಿಗೆ ಕಾಸರಗೋಡಿಗೆ ಬಂದಿದ್ದ. ನಕಲಿ ದಾಖಲೆ ಬಳಸಿ ಕಾಸರಗೋಡಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಖಾತೆಯನ್ನೂ ತೆರೆದಿದ್ದು, ಈತನಿಗೆ ಸಹಾಯ ಮಾಡಿದವರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ಸಕ್ರಿಯಗೊಳಿಸಲು ಹಾಗೂ ಸ್ಲೀಪರ್‌ ಸೆಲ್‌ಗ‌ಳನ್ನು ಜಾಗೃತಗೊಳಿಸಲು ಅಲ್ ಖೈದಾ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ. ಕಟ್ಟಡ ಕಾರ್ಮಿಕನ ಸೋಗಿನಲ್ಲಿದ್ದರೂ, ಆತ ಕಟ್ಟಡದಲ್ಲಿ ಕೆಲಸ ಮಾಡುತ್ತಿರಲಿಲ್ಲ. ನಿಗೂಢ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಈತನನ್ನು ಹಲವು ಸಮಯಗಳಿಂದ ಬೇಹುಗಾರಿಕೆ ನಡೆಸಿದ್ದರು. ಚಟುವಟಿಕೆ ಬಗ್ಗೆ ನಿಗಾ ಇಟ್ಟಿದ್ದರು. 

ಇತ್ತೀಚೆಗೆ ಅಸ್ಸಾಂ ಟಾಸ್ಕ್‌ ಫೋರ್ಸ್‌ ಉಗ್ರ ಚಟುವಟಿಕೆ ಆರೋಪದಲ್ಲಿ ಅಸ್ಸಾಂನಿಂದ ಐವರು ಹಾಗೂ ಪಶ್ಚಿಮ ಬಂಗಾಳದಲ್ಲಿ ಇಬ್ಬರನ್ನು ಬಂಧಿಸಿತ್ತು. ಇವರೆಲ್ಲರೂ ಹಿಂದೂ ನಾಯಕರನ್ನು ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಇದರ ಬೆನ್ನಲ್ಲೇ ಕಾಸರಗೋಡಿನಲ್ಲಿ ತಲೆಮರೆಸಿಕೊಂಡಿದ್ದ ಶಾಬ್ ಶೇಖ್ ನನ್ನು ಎತ್ತಾಕ್ಕೊಂಡು ಹೋಗಿದ್ದರು.

The investigation team has revealed that Bangladeshi citizen M D Shab Sheikh, arrested by the Assam Special Task Force from Padannakad in the district, was an active member of a sleeper cell associated with Al Qaeda.