ಭೂತಾನ್‌, ಮ್ಯಾನ್ಮಾರ್‌, ಶ್ರೀಲಂಕಾದಿಂದ ಕಳಪೆ ಅಡಿಕೆ ಆಮದು ನಿಲ್ಲಿಸಿ, ಸುಂಕ ಮುಕ್ತ ನೀತಿಯಿಂದ ಕರಾವಳಿ ಕೃಷಿಕರಿಗೆ ಸಂಕಷ್ಟ ; ಅಡಿಕೆ ಬೆಳೆಗಾರರ ಪರ ಸದನದಲ್ಲಿ ಧ್ವನಿಯೆತ್ತಿದ ಸಂಸದ ಚೌಟ 

01-12-25 10:18 pm       HK News Desk   ದೇಶ - ವಿದೇಶ

ಭೂತಾನ್, ಮ್ಯಾನ್ಮಾರ್ ಮತ್ತು ಶ್ರೀಲಂಕಾದಂತಹ ದೇಶಗಳಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವುದರಿಂದ ನಮ್ಮ ಬೆಳೆಗಾರರಿಗೆ ಎದುರಾಗಿರುವ ಗಂಭೀರ ಪರಿಣಾಮಗಳ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಧ್ವನಿಯೆತ್ತಿದ್ದಾರೆ. 

ನವದೆಹಲಿ, ಡಿ.1 : ಭೂತಾನ್, ಮ್ಯಾನ್ಮಾರ್ ಮತ್ತು ಶ್ರೀಲಂಕಾದಂತಹ ದೇಶಗಳಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವುದರಿಂದ ನಮ್ಮ ಬೆಳೆಗಾರರಿಗೆ ಎದುರಾಗಿರುವ ಗಂಭೀರ ಪರಿಣಾಮಗಳ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಧ್ವನಿಯೆತ್ತಿದ್ದಾರೆ. 

ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಸಂಸದ ಕ್ಯಾ. ಚೌಟ ಅವರು ನೆರೆಯ ಸಣ್ಣ ದೇಶಗಳಿಂದ ಸುಂಕ ಮುಕ್ತ ಅಡಿಕೆ ಆಮದಿನಿಂದಾಗಿ ಕರ್ನಾಟಕವು ಸೇರಿ ನಮ್ಮ ದೇಶದ ಅಡಿಕೆ ಬೆಳೆಗಾರರಿಗೆ ದೊಡ್ಡ ಮಟ್ಟದ ಹೊಡೆತ ನೀಡುತ್ತಿರುವುದಾಗಿ ಚಳಿಗಾಲ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಸದನದ  ಗಮನ ಸೆಳೆದಿದ್ದಾರೆ. 

ನೆರೆಯ ಈ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ವ್ಯಾಪಾರ-ವ್ಯವಹಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭಾರತ ಸರ್ಕಾರವು ಸುಂಕ ಮುಕ್ತ(ಡಿಎಫ್‌ಕ್ಯೂಎಫ್‌) ವ್ಯವಸ್ಥೆಯಡಿ ಶೂನ್ಯ ಸುಂಕ ವಿಧಿಸುತ್ತಿದೆ. ಆದರೆ, ಈ ಸುಂಕ ಮುಕ್ತ ವ್ಯವಸ್ಥೆಯನ್ನು ಈ ದೇಶಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅದರಿಂದ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿ ದೇಶದ ಅಡಿಕೆ ಬೆಳೆಗಾರರಿಗೆ ದೊಡ್ಡ ಅಪಾಯವುಂಟು ಮಾಡುತ್ತಿದೆ. ಅಷ್ಟೇ ಅಲ್ಲ, ಈ ಶೂನ್ಯ ಸುಂಕ ವ್ಯವಸ್ಥೆಯಿಂದಾಗಿ ಶ್ರೀಲಂಕಾ, ಭೂತಾನ್‌ನಂಥ ದೇಶಗಳಿಂದ ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಅಡಿಕೆ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತಿದೆ. ಇದು ಸಹಜವಾಗಿಯೇ ನಮ್ಮ ದೇಶದ ಅಡಿಕೆ ದರ ಕುಸಿತವಾಗಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ತಳ್ಳುತ್ತಿದೆ. ಉದಾಹರಣೆಗೆ 2023ರ ಸೆಪ್ಟಂಬರ್‌ನಿಂದ 2024ರ ಆಗಸ್ಟ್‌ ವರೆಗಿನ ಅವಧಿಯಲ್ಲಿ ಒಟ್ಟು 30,271 ಟನ್ ಅಡಿಕೆ ಆಮದು ಮಾಡಲಾಗಿದ್ದು ಈ ಪೈಕಿ ಭೂತಾನ್‌ನಿಂದ ಶೇ.57ರಷ್ಟು, ಮಾಯನ್ಮಾರ್‌ನಿಂದ ಶೇ.39ರಷ್ಟು ಹಾಗೂ ಶ್ರೀಲಂಕಾದಿಂದ ಶೇ.2ರಷ್ಟು ಕಳಪೆ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಕ್ಯಾ. ಚೌಟ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, 2023-24ರ ಅವಧಿಯಲ್ಲಿ ಸುಮಾರು 14 ಲಕ್ಷ ಟನ್‌ ಅಡಿಕೆ ಉತ್ಪಾದಿಸಿದೆ. ಕರ್ನಾಟಕ ಒಂದೇ ಸುಮಾರು 10 ಲಕ್ಷ ಟನ್‌ ಅಡಿಕೆ ಉತ್ಪಾದಿಸಿದೆ. ನಮ್ಮ ದೇಶದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಅಡಿಕೆ ಉತ್ಪಾದನೆ ಆಗುತ್ತಿರುವಾಗ, ನೆರೆಯ ಕಡಿಮೆ ಹಿಂದುಳಿದ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಶೂನ್ಯ ಸುಂಕ ಪಾವತಿ ವ್ಯವಸ್ಥೆಯಡಿ ಆಮದು ಮಾಡುವ ಅಗತ್ಯವಿಲ್ಲ. ಇದರಿಂದ ನಮ್ಮ ಅಡಿಕೆಯ ದರ ಹಾಗೂ ಬೇಡಿಕೆ ಕುಸಿದು ಬೆಳೆಗಾರರು ತೀವ್ರ ಆರ್ಥಿಕ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇದು ಹೆಚ್ಚು ಅಡಿಕೆ ಬೆಳೆಯುವ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರನ್ನು ತೀವ್ರವಾಗಿ ಬಾಧಿಸಿದೆ ಎಂದು ಕ್ಯಾ.ಚೌಟ ಸದನದ ಗಮನಕ್ಕೆ ತಂದಿದ್ದಾರೆ. 

ಸಾಮಾನ್ಯವಾಗಿ ಹೊರ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವಾಗ ಶೇ.100ರಷ್ಟು ಮೂಲ ಸುಂಕ ವಿಧಿಸಲಾಗುತ್ತದೆ. ಆದರೆ, ಈ ಸುಂಕ ಮುಕ್ತ ವ್ಯವಸ್ಥೆಯು ನೆರೆ ದೇಶಗಳಿಂದ ಅಡಿಕೆಯಂಥ ಉತ್ಪನ್ನ ಸುಲಭವಾಗಿ ಭಾರತವನ್ನು ಪ್ರವೇಶಿಸಿ ನಮ್ಮ ರೈತರಿಗೆ ದೊಡ್ಡ ಅಪಾಯವುಂಟು ಮಾಡಿದೆ. ಈ ಸುಂಕ ಮುಕ್ತ ವಿನಾಯಿತಿಯು ಬೆಲೆ ಕುಸಿತ, ಮಾರುಕಟ್ಟೆ ಅಸ್ಥಿರತೆ ಮತ್ತು ಈ ಅಡಿಕೆ ಬೆಳೆಯನ್ನು ಅವಲಂಬಿಸಿ ಬದುಕು ನಡೆಸುತ್ತಿರುವ ಲಕ್ಷಾಂತರ ಕೃಷಿಕರನ್ನು ಆರ್ಥಿಕ ಮುಗ್ಗಟ್ಟಿಗೆ ದೂಡುತ್ತಿದೆ ಎಂದು ಸಂಸದರು ಹೇಳಿದ್ದಾರೆ. 

ಅಡಿಕೆ ಆಮದು ಸಮಸ್ಯೆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೂ ಸಂಸದ ಚೌಟ ಮನವಿ ಸಲ್ಲಿಸಿದ್ದಾರೆ. ಸುಂಕ ಮುಕ್ತ ಉತ್ಪನ್ನ ಆಮದು ಪಟ್ಟಿಯಿಂದ ಅಡಿಕೆಯನ್ನು ಹೊರಗಿಡಬೇಕು ಹಾಗೂ ಕಡಿಮೆ ಅಭಿವೃದ್ಧಿ ಹೊಂದಿರುವ ದೇಶಗಳಿಂದ ಆಮದಾಗುವ ಉತ್ಪನ್ನಗಳಿಗೆ ಸಾಮಾನ್ಯ ಸುಂಕ ವಿಧಿಸುವ ವ್ಯವಸ್ಥೆ ಮರು ಸ್ಥಾಪಿಸಬೇಕು. ಆ ಮೂಲಕ ಅಡಿಕೆ ಬೆಳೆಯುವ ಭಾಗದ ಲಕ್ಷಾಂತರ ರೈತರ ಹಿತ ಕಾಪಾಡುವಂತೆ ಮನವಿಯಲ್ಲಿ ಸಂಸದರು ಒತ್ತಾಯಿಸಿದ್ದಾರೆ.

In the Lok Sabha, Dakshina Kannada MP Capt. Brijesh Chowta highlighted the severe challenges faced by Indian arecanut farmers due to large-scale duty-free imports from Bhutan, Myanmar, and Sri Lanka under the DFQF scheme. He warned that the influx of low-quality, cheap arecanut has destabilized domestic prices, severely hurting growers in Karnataka—India’s largest producer with 10 lakh tonnes annually.