IndiGo Cancels Nearly 200 Flights Nationwide; ಇಂಡಿಗೋದ ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದು ; ದೇಶಾದ್ಯಂತ ಪ್ರಯಾಣಿಕರು ತತ್ತರು, ಕ್ಯಾಕರಿಸಿ ಉಗಿಯುತ್ತಿರುವ ಪ್ರಯಾಣಿಕರು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಎಲ್ಲೆಲ್ಲೂ ಬರೀ ಇಕ್ಕಟ್ಟು !

04-12-25 11:15 am       HK News Desk   ದೇಶ - ವಿದೇಶ

ಅಚ್ಚರಿ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದ್ದು, ದಿಢೀರ್ ಅವ್ಯವಸ್ಥೆಯಿಂದಾಗಿ ದೇಶಾದ್ಯಂತ ಪ್ರಯಾಣಿಕರು ತತ್ತರಿಸಿ ಹೋಗಿದ್ದಾರೆ.

ನವದೆಹಲಿ, ಡಿ 04 : ಅಚ್ಚರಿ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದ್ದು, ದಿಢೀರ್ ಅವ್ಯವಸ್ಥೆಯಿಂದಾಗಿ ದೇಶಾದ್ಯಂತ ಪ್ರಯಾಣಿಕರು ತತ್ತರಿಸಿ ಹೋಗಿದ್ದಾರೆ.

ಇಂಡಿಗೋದ ತಾಂತ್ರಿಕ ಮತ್ತು ಸಿಬ್ಬಂದಿ ಕೊರತೆ ಕಾರಣದಿಂದಾಗಿ ದೇಶಾದ್ಯಂತ ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದೆ. ಪರಿಣಾಮ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿದ್ದಾರೆ.

ಮೂಲಗಳ ಪ್ರಕಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 42 ದೇಶೀಯ ವಿಮಾನಗಳು ರದ್ದಾಗಿದ್ದು ಈ ಪೈಕಿ 22 ಆಗಮನ, 20 ನಿರ್ಗಮನ ವಿಮಾನಗಳು ರದ್ದಾಗಿವೆ.

ಪ್ರತಿದಿನ ಸುಮಾರು 2,300 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುವ ವಿಮಾನಯಾನ ಸಂಸ್ಥೆ ಇಂಡಿಗೋ ಬುಧುವಾರ ಅನಿರೀಕ್ಷಿತ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಿತು.

ಅಂತೆಯೇ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ 67 ವಿಮಾನಗಳು ರದ್ದಾಗಿದ್ದು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ 51ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದೆ. ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 19 ಇಂಡಿಗೋ ವಿಮಾನಗಳು ರದ್ದಾಗಿವೆ ಎಂದು ತಿಳಿದುಬಂದಿದೆ.

ಇದಲ್ಲದೆ ಬೆಂಗಳೂರಿನಿಂದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಗೋವಾ, ಕೋಲ್ಕತ್ತಾ ಮತ್ತು ಲಕ್ನೋವನ್ನು ಸಂಪರ್ಕಿಸುವ ವಿಮಾನಗಳು ಸಹ ಈ ಅಡಚಣೆಗಳಿಗೆ ಸಾಕ್ಷಿಯಾದವು.

ಈ ವಾರ ದೆಹಲಿ ಮತ್ತು ಮುಂಬೈನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ನಡೆಸಿದ ಬೃಹತ್ ನೇಮಕಾತಿ ಪ್ರಕ್ರಿಯೆಯಿಂದಾಗಿ ಈ ಕೊರತೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ಅನಿರೀಕ್ಷಿತ ಕಾರ್ಯಾಚರಣೆಯ ಸವಾಲುಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಇಂಡಿಗೋ ಗಮನಾರ್ಹ ಅಡಚಣೆಗೆ ಕಾರಣವಾಗಿದೆ. ಕಾಕ್‌ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿ ಎರಡರ ತೀವ್ರ ಕೊರತೆಯಿಂದಾಗಿ ವಿಮಾನ ಸಂಚಾರದಲ್ಲಿ ಗಂಭೀರ ವ್ಯತ್ಯಯ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ರದ್ದತಿಗೆ ಕಾರಣ?

ವಿಶ್ಲೇಷಕರು ಅಭಿಪ್ರಾಯಪಟ್ಟಿರುವಂತೆ, ತಾಂತ್ರಿಕ ದೋಷಗಳು ಮತ್ತು ಹೊಸ ಎಫ್‌ಡಿಟಿಎಲ್ (ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್) ನಿಯಮಗಳು ವಿಮಾನಗಳ ರದ್ಧತಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಅಂತೆಯೇ ಚಳಿಗಾಲದಲ್ಲಿ ವೇಳಾಪಟ್ಟಿ ಬದಲಾವಣೆ, ಹವಾಮಾನ ಸಮಸ್ಯೆ ಕೂಡ ವಿಮಾನ ರದ್ದತಿಗೆ ಕಾರಣವಾಗಿದ್ದು, ಇದು ವಿಮಾನ ನಿಲ್ದಾಣದಲ್ಲಿ ದಟ್ಟಣೆಗೆ ಕಾರಣವಾಗಿದೆ.

ಇದಲ್ಲದೆ ಇಂಡಿಗೋದಲ್ಲಿ ತೀವ್ರಗೊಂಡಿರುವ ಪೈಲಟ್‌ಗಳ ಕೊರತೆಯೂ ವಿಮಾನಗಳ ರದ್ದತಿಗೆ ಕಾರಣ ಎಂದು ಹೇಳಲಾಗಿದ್ದು, ಹೊಸ ಎಫ್‌ಡಿಟಿಎಲ್ ನಿಯಮಗಳು ಪೈಲಟ್‌ಗಳ ವಾರದ ವಿಶ್ರಾಂತಿ 48 ಗಂಟೆಗೆ ಹೆಚ್ಚಿಸಿದೆ, ರಾತ್ರಿ ಕರ್ತವ್ಯ ಸಮಯ ವಿಸ್ತರಣೆ ಮತ್ತು ರಾತ್ರಿ ಲ್ಯಾಂಡಿಂಗ್ ಎರಡಕ್ಕೆ ಸೀಮಿತಗೊಳಿಸಿದೆ. ಇದು ಪೈಲಟ್ ಗಳ ಗಂಭೀರ ಕೊರತೆಗೆ ಕಾರಣವಾಗಿದೆ.

ಹೊಸ ರೋಸ್ಟರಿಂಗ್ ನಿಯಮಗಳಲ್ಲಿ ಪೈಲಟ್‌ಗಳಿಗೆ ವಾರದ ವಿಶ್ರಾಂತಿಯನ್ನು 36 ಗಂಟೆಗಳಿಂದ 48 ಗಂಟೆಗಳವರೆಗೆ ಹೆಚ್ಚಿಸಲಾಗಿದೆ ಮತ್ತು ಪೈಲಟ್‌ಗಳು ನಡೆಸುವ ರಾತ್ರಿ ಲ್ಯಾಂಡಿಂಗ್‌ಗಳನ್ನು ಆರು ಗಂಟೆಗಳ ಬದಲಿಗೆ ಕೇವಲ ಎರಡಕ್ಕೆ ಸೀಮಿತಗೊಳಿಸಲಾಗಿದೆ.

ಕಳೆದ ಎರಡು ದಿನಗಳಿಂದ ಮುಂಬೈ ಮತ್ತು ದೆಹಲಿಯಲ್ಲಿ ಎಮಿರೇಟ್‌ನ ನೇಮಕಾತಿ ಪ್ರಕ್ರಿಯೆಗಾಗಿ ಹಲವಾರು ಇಂಡಿಗೋ ಸಿಬ್ಬಂದಿಗಳು ನೇರ ಸಾಲಿನಲ್ಲಿ ನಿಂತಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

"ಇಂಡಿಗೋದ ಕಡೆಯಿಂದ ಆಗಿರುವ ತಪ್ಪು ನಿರ್ವಹಣೆಯೂ ಸಹ ಕಳೆದ ಎರಡು ದಿನಗಳಿಂದ ಅವರು ಎದುರಿಸುತ್ತಿರುವ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ" ಎಂದು ವಿಮಾನಯಾನ ಮೂಲಗಳು ತಿಳಿಸಿವೆ. ನವೆಂಬರ್ 1 ರಿಂದ ಎಲ್ಲಾ ವಿಮಾನಯಾನ ಸಂಸ್ಥೆಗಳು ಪರಿಷ್ಕೃತ ವಿಮಾನ ಕರ್ತವ್ಯ ಸಮಯದ ಮಿತಿಗಳನ್ನು ಜಾರಿಗೆ ತಂದಿವೆ.

ಕ್ಷಮೆಯಾಚಿಸಿದ ಇಂಡಿಗೋ

ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ಗಂಭೀರವಾಗಿ ಅಡಚಣೆಗೊಳಗಾಗಿದೆ ಎಂದು ಒಪ್ಪಿಕೊಂಡಿರುವ ಇಂಡಿಗೋ, ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ. ಜೊತೆಗೆ ಕಾರ್ಯಾಚರಣೆ ಸ್ಥಿರಗೊಳಿಸಲು ತಾತ್ಕಾಲಿಕ ವೇಳಾಪಟ್ಟಿ ಹೊಂದಾಣಿಕೆ ಮಾಡಲಾಗಿದೆ ಎಂದಿದ್ದು, ಈ ಅಡೆಚಣೆಯು ಮುಂದಿನ 48 ಗಂಟೆಗಳ ಕಾಲ ಈ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದೆ.

ಇನ್ನು ಬೆಂಗಳೂರಿನ ಟರ್ಮಿನಲ್ 1ರಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಡಿಪಾರ್ಚರ್ ಗೇಟ್‌ ಬಳಿ ಪ್ರಯಾಣಿಕರು ಕುಳಿತುಕೊಳ್ಳಲು ಜಾಗವೇ ಸಿಗದಷ್ಟು ಇಕ್ಕಟ್ಟು ಉಂಟಾಯಿತು. ಗೇಟ್‌ಗಳ ಬಳಿ ಜನಸಂದಣಿ ಹೆಚ್ಚಾದ ಕಾರಣ, ಪ್ರಯಾಣಿಕರು ನೆಲದಲ್ಲೇ ಕೂತು ವಿಶ್ರಾಂತಿ ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಯಿತು.

ವಿಮಾನ ವಿಳಂಬದಿಂದ ಏರ್‌ಪೋರ್ಟ್‌ನಲ್ಲಿ ಅತಿಯಾದ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ಏರ್‌ಪೋರ್ಟ್ ಸಿಬ್ಬಂದಿಗೂ ನಿಯಂತ್ರಣ ಕಷ್ಟವಾಗಿದೆ. ಪ್ರಯಾಣಿಕರು ಇಂಡಿಗೋ ಏರ್‌ಲೈನ್ಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

In a major disruption, India’s largest airline IndiGo cancelled nearly 200 flights across the country due to sudden operational challenges, including acute shortages of cockpit and cabin crew, technical issues, and the impact of new Flight Duty Time Limit (FDTL) rules. Airports in Bengaluru, Delhi, Mumbai, and Hyderabad witnessed massive chaos as thousands of passengers were left waiting for hours. Sources report that Emirates’ ongoing recruitment drive has also contributed to staff shortages.