ಗ್ರೀನ್‌ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾಷ್ಟ್ರಗಳ ಮೇಲೇ ಎಗರಿಬಿದ್ದ ದೊಡ್ಡಣ್ಣ, ಯುರೋಪಿನ ಎಂಟು ರಾಷ್ಟ್ರಗಳಿಗೆ ಸುಂಕದ ಬರೆ ! 

18-01-26 06:03 pm       HK News Desk   ದೇಶ - ವಿದೇಶ

ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಯುರೋಪ್ ಖಂಡದ ತನ್ನ ಬಹುಕಾಲದ ಎಂಟು ಮಿತ್ರ ರಾಷ್ಟ್ರಗಳೇ ವಿರುದ್ಧವೇ ಅಮೆರಿಕ ಸುಂಕದ ಬರೆ ಹಾಕಿದೆ. ಆ ರಾಷ್ಟ್ರಗಳಿಂದ ಆಮದಾಗುವ ಸರಕುಗಳ ಮೇಲೆ ಹತ್ತು ಶೇ. ಹೆಚ್ಚುವರಿ ತೆರಿಗೆ ವಿಧಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ವಾಷಿಂಗ್ಟನ್, ಜ.18 : ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಯುರೋಪ್ ಖಂಡದ ತನ್ನ ಬಹುಕಾಲದ ಎಂಟು ಮಿತ್ರ ರಾಷ್ಟ್ರಗಳೇ ವಿರುದ್ಧವೇ ಅಮೆರಿಕ ಸುಂಕದ ಬರೆ ಹಾಕಿದೆ. ಆ ರಾಷ್ಟ್ರಗಳಿಂದ ಆಮದಾಗುವ ಸರಕುಗಳ ಮೇಲೆ ಹತ್ತು ಶೇ. ಹೆಚ್ಚುವರಿ ತೆರಿಗೆ ವಿಧಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್‌ಲ್ಯಾಂಡ್ಸ್ ಮತ್ತು ಫಿನ್‌ಲ್ಯಾಂಡ್ ಮೇಲೆ ಶೇ.10ರಷ್ಟು ಹೆಚ್ಚಿನ ತೆರಿಗೆ ಹೇರಲಾಗಿದ್ದು, ಹೊಸ ಸುಂಕದ ನಿಯಮ ಫೆಬ್ರವರಿ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಮುಂದಿನ ಜೂನ್ 1ರೊಳಗೆ “ಗ್ರೀನ್‌ಲ್ಯಾಂಡ್ ಸಂಪೂರ್ಣ ಅಮೆರಿಕಾ ವಶವಾಗದಿದ್ದರೆ ಈ ಸುಂಕವನ್ನು 25 ಶೇಕಡಾಕ್ಕೆ ಹೆಚ್ಚಿಸಲಾಗುತ್ತದೆ ಎಂದೂ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ತಿಳಿಸಿದ್ದಾರೆ.

ಇದಲ್ಲದೆ, ಗ್ರೀನ್‌ಲ್ಯಾಂಡ್‌ ವಶಕ್ಕೆ ಪಡೆಯುವ ತನ್ನ ಉದ್ದೇಶಕ್ಕೆ ವಿರೋಧಿಸಿದರೆ ‘ನ್ಯಾಟೋ’ ಕೂಟದಿಂದಲೇ ಹೊರಬರುವುದಾಗಿ ಟ್ರಂಪ್ ತನ್ನ ಮಿತ್ರ ರಾಷ್ಟ್ರಗಳಿಗೆ ಬೆದರಿಕೆ ಹಾಕಿದ್ದಾರೆ. ಗ್ರೀನ್‌ ಲ್ಯಾಂಡ್ ವಶಪಡಿಸಿಕೊಳ್ಳಲು ನ್ಯಾಟೋದಿಂದ ನೆರವು ಸಿಗದಿದ್ದರೆ ನೀವು ಒಕ್ಕೂಟದಿಂದ ಹೊರಬರಲಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ನಾವು ಪರಿಶೀಲಿಸುತ್ತೇವೆ. ನಮ್ಮ ರಾಷ್ಟ್ರೀಯ ಭದ್ರತೆಗೆ ಗ್ರೀನ್‌ಲ್ಯಾಂಡ್‌ ಅತ್ಯಗತ್ಯ. ನಮ್ಮ ಕೈಯಲ್ಲಿ ಗ್ರೀನ್‌ ಲ್ಯಾಂಡ್‌ ಇಲ್ಲದೇ ಹೋದರೆ ವಿಶೇಷವಾಗಿ ಗೋಲ್ಡನ್‌ ಡೋಮ್‌ (ಕ್ಷಿಪಣಿ ರಕ್ಷಣಾ ವ್ಯವಸ್ಥೆ) ಸೇರಿ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಲಿದೆ ಎಂದು ತಿಳಿಸಿದರು.

ನಾವು ಗ್ರೀನ್‌ಲ್ಯಾಂಡ್ ದೇಶವನ್ನು ವಶಪಡಿಸಿಕೊಂಡೇ ತೀರುತ್ತೇವೆ ಎಂದು ಹಲವು ದಿನಗಳಿಂದ ಟ್ರಂಪ್‌ ಹೇಳುತ್ತಲೇ ಇದ್ದಾರೆ. ಇದೇ ವೇಳೆ, ನ್ಯಾಟೋ ದೇಶಗಳಾದ ಜರ್ಮನಿ, ಫ್ರಾನ್ಸ್‌, ಡೆನ್ಮಾರ್ಕ್‌ ಸೇರಿ ಹಲವು ದೇಶಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತ ಬಂದಿವೆ. ಇದಲ್ಲದೆ, ಹಲವು ದೇಶಗಳು ಗ್ರೀನ್‌ಲ್ಯಾಂಡ್‌ಗೆ ತಮ್ಮ ಸೇನೆಯನ್ನು ಕಳುಹಿಸಿಕೊಟ್ಟು ಟ್ರಂಪ್‌ ನಿರ್ಧಾರಕ್ಕೆ ಸಡ್ಡು ಹೊಡೆದಿವೆ. ಇದರ ಬೆನ್ನಲ್ಲೇ ಟ್ರಂಪ್‌ ಹೆಚ್ಚುವರಿ ತೆರಿಗೆಯ ಎಚ್ಚರಿಕೆ ನೀಡಿದ್ದಾರೆ.

ನ್ಯಾಟೋ ಎಂಬುದು ಮಿಲಿಟರಿ ಒಕ್ಕೂಟವಾಗಿದ್ದು ಎರಡನೇ ಮಹಾಯುದ್ಧದ ಬಳಿಕ ಅಸ್ತಿತ್ವಕ್ಕೆ ಬಂದಿತ್ತು. 1949ರಲ್ಲಿ ಯುರೋಪಿನ 30 ದೇಶಗಳು ಮತ್ತು ಉತ್ತರ ಅಮೆರಿಕದ ಎರಡು ದೇಶಗಳು ಸೇರಿಕೊಂಡು ತಮ್ಮ ರಕ್ಷಣೆಗಾಗಿ ಸೇನಾ ಕೂಟವನ್ನು ರಚಿಸಿಕೊಂಡಿತ್ತು. ಸದಸ್ಯ ದೇಶಗಳ ಮೇಲೆ ಬೇರೆ ಯಾವುದೇ ದೇಶ ದಾಳಿ ಮಾಡಿದರೆ ನ್ಯಾಟೋ ದೇಶಗಳು ಒಂದಾಗಿ ಆ ದೇಶದ ರಕ್ಷಣೆಗೆ ಬರುತ್ತವೆ. 2024ರಲ್ಲಿ ನ್ಯಾಟೋ ಪಡೆಗಳ ವಾರ್ಷಿಕ ವೆಚ್ಚ 45 ಲಕ್ಷ ಕೋಟಿ ರು.ನಷ್ಟಿತ್ತು. ಇದರಲ್ಲಿ ಮೂರನೇ ಎರಡು ಭಾಗದಷ್ಟು ವೆಚ್ಚವನ್ನು ಅಮೆರಿಕವೊಂದೇ ಭರಿಸುತ್ತದೆ. ಹೀಗಾಗಿ ಅಮೆರಿಕ ನ್ಯಾಟೋ ತೊರೆದರೆ, ಸೇನಾ ಕೂಟಕ್ಕೆ ಭಾರೀ ಹೊರೆ ಬೀಳಲಿದೆ. ಹೀಗಾಗಿ ಯುರೋಪ್ ದೇಶಗಳಿಗೆ ಉಗುಳಲೂ ಆಗದ, ನುಂಗಿಕೊಳ್ಳಲೂ ಆಗದ ಸ್ಥಿತಿಯಾಗಿದೆ. ‌

Angered by opposition to his plan to take control of Greenland, US President Donald Trump has imposed a 10% additional tariff on imports from eight long-time NATO allies, including Denmark, Germany, France, and the UK. Warning that the levy could rise to 25% by June if Greenland is not handed over, Trump also threatened to reconsider US participation in NATO, calling Greenland critical to America’s national security and missile defence plans.