ಚತ್ತೀಸ್ ಗಢ್: ಎನ್ ಕೌಂಟರ್ ಗೆ ನಾಲ್ವರು ನಕ್ಸಲೀಯರು ಬಲಿ

12-08-20 09:25 am       Headline Karnataka News Network   ದೇಶ - ವಿದೇಶ

ಛತ್ತೀಸ್‌ಗಢದಲ್ಲಿ ಇಂದು ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಹತ್ಯೆಗೈದಿದೆ. ಅಲ್ಲದೆ 303 ರೈಫಲ್ ಗಳನ್ನು, ದೇಶೀ ನಿರ್ಮಿತ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಯ್ ಪುರ್: ಭದ್ರತಾ ಪಡೆ ನಡೆಸಿದ ಎನ್ ಕೌಂಟರ್ ಗೆ ನಾಲ್ವರು ನಕ್ಸಲೀಯರು ಸಾವನ್ನಪ್ಪಿರುವ ಘಟನೆ ಚತ್ತೀಸ್ ಗಢದ ನಕ್ಸಲ್ ಬಂಡುಕೋರರು ಹೆಚ್ಚಾಗಿರುವ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು ವರದಿ ತಿಳಿಸಿದೆ.

ಮೂಲಗಳ ಪ್ರಕಾರ ಫುಲಂಪಾರ್ ಗ್ರಾಮದಲ್ಲಿ ಸೇನಾಪಡೆಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಅಡಗಿ ಕುಳಿತಿದ್ದ ನಕ್ಸಲರು ಏಕಾಏಕಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲೀಯರು ಸಾವಿಗೀಡಾಗಿದ್ದಾರೆ. ಜಿಲ್ಲಾ ಮೀಸಲು ಪಡೆ (ಡಿಆರ್ ಜಿ), 201 ಬೆಟಾಲಿಯನ್ ಕೋಬ್ರಾ ಮತ್ತು 223 ಬೆಟಾಲಿಯನ್ ಸಿಆರ್ ಪಿಎಫ್ ಸುಕ್ಮಾ ಜಿಲ್ಲೆಯ ಜಗರ್ಗುಂಡಾ ಅರಣ್ಯಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಘಟನಾ ಸ್ಥಳದಲ್ಲಿ ನಾಲ್ಕು ಪುರುಷ ನಕ್ಸಲರ ಮೃತದೇಹಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ 303 ರೈಫಲ್ ಗಳನ್ನು, ದೇಶೀ ನಿರ್ಮಿತ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಂತೆಯೇ ಶೋಧ ಕಾರ್ಯ ಕೂಡ ಮುಂದುವರೆದಿದೆ.