ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮಾಡಿದರೆ ಕೇರಳಕ್ಕೇನು ನಷ್ಟ ? ಕಾಂಗ್ರೆಸ್ ತನ್ನ ವೈಫಲ್ಯ ಮುಚ್ಚಿಕೊಳ್ಳಲು ವಿವಾದ ಸೃಷ್ಟಿಸುತ್ತಿದೆ, ರಾಜೀವ ಚಂದ್ರಶೇಖರ್ ತಿರುಗೇಟು

26-08-26 12:01 pm       HK News Staffer   ದೇಶ - ವಿದೇಶ

ಕೇರಳದ ಪಾಲಕ್ಕಾಡ್‌ ರೈಲ್ವೆ ವಲಯವನ್ನು ವಿಭಜಿಸಿ ಅದರ ವ್ಯಾಪ್ತಿಯಲ್ಲಿದ್ದ ಮಂಗಳೂರನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸುವ ಪ್ರಸ್ತಾಪವನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ರಾಜೀವ್‌ ಚಂದ್ರಶೇಖರ್‌ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅದು ರೈಲ್ವೇಯ ಆಡಳಿತಾತ್ಮಕ ನಿರ್ಧಾರ, ಅದರಿಂದ ಕೇರಳ ಸರ್ಕಾರಕ್ಕೇನು ನಷ್ಟ ಇದೆ ಎಂದು ಪ್ರಶ್ನಿಸಿದ್ದಾರೆ.

ತಿರುವನಂತಪುರಂ, ಆ.26: ಕೇರಳದ ಪಾಲಕ್ಕಾಡ್‌ ರೈಲ್ವೆ ವಲಯವನ್ನು ವಿಭಜಿಸಿ ಅದರ ವ್ಯಾಪ್ತಿಯಲ್ಲಿದ್ದ ಮಂಗಳೂರನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸುವ ಪ್ರಸ್ತಾಪವನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ರಾಜೀವ್‌ ಚಂದ್ರಶೇಖರ್‌ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅದು ರೈಲ್ವೇಯ ಆಡಳಿತಾತ್ಮಕ ನಿರ್ಧಾರ, ಅದರಿಂದ ಕೇರಳ ಸರ್ಕಾರಕ್ಕೇನು ನಷ್ಟ ಇದೆ ಎಂದು ಪ್ರಶ್ನಿಸಿದ್ದಾರೆ. 

ರಾಜ್ಯದ ಯುಡಿಎಫ್‌ ಸರ್ಕಾರ 100 ದಿನಗಳ ಆಡಳಿತದಲ್ಲಿ ವೈಫಲ್ಯ ಕಂಡಿದೆ. ಇದರಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಈ ವಿಷಯದಲ್ಲಿ ಕಾಂಗ್ರೆಸ್‌ ವಿವಾದ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ರಾಜೀವ್‌ ಚಂದ್ರಶೇಖರ್‌, ‘ರೈಲ್ವೆ ಇಲಾಖೆಯ ಪ್ರಸ್ತಾಪ ಆಡಳಿತಾತ್ಮಕ ಉದ್ದೇಶದ್ದು. ಇದರಿಂದ ಕೇರಳಂ ಆತಂಕ ಪಡಬೇಕಾದ ಯಾವುದೇ ಪ್ರಮೇಯವೂ ಇಲ್ಲ. ರೈಲ್ವೆ ರಾಷ್ಟ್ರೀಯ ಸಂಸ್ಥೆಯಾಗಿದೆ. ಹೀಗಿರುವಾಗ ಮಂಗಳೂರನ್ನು ಪಾಲಕ್ಕಾಡ್‌ ವಿಭಾಗದಿಂದ ಬೇರ್ಪಡಿಸಿ, ಕರ್ನಾಟಕದಲ್ಲೇ ಇರುವ ಮೈಸೂರು ವಿಭಾಗಕ್ಕೆ ಸೇರಿಸಿದರೆ ಅದರಿಂದ ಕಾಂಗ್ರೆಸ್‌ಗೆ ಏನು ಸಮಸ್ಯೆ?’ ಎಂದು ಪ್ರಶ್ನಿಸಿದರು. 

ಮಂಗಳೂರು ಈಗಾಗಲೇ ಮೂರು ರೈಲ್ವೆ ವಿಭಾಗಗಳೊಂದಿಗೆ ಸಂಪರ್ಕ ಹೊಂದಿದೆ. ಹೀಗಿರುವಾಗ ಮುಖ್ಯಮಂತ್ರಿ ವಿ.ಡಿ.ಸತೀಶನ್‌, ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ಇದನ್ನು ರಾಜಕೀಯ ವಿವಾದ ಮಾಡುತ್ತಿರುವುದೇಕೆ? ರಾಜ್ಯದಲ್ಲಿ ಯುಡಿಎಫ್‌ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ತುಂಬಿವೆ. ನೀಡಿದ ಭರವಸೆಗಳನ್ನು ಅದು ಈಡೇರಿಸಿಲ್ಲ. ಹೀಗಾಗಿ ಈ ವಿಷಯದಿಂದ ಜನರ ಗಮನ ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಅವರು ಪಾಲಕ್ಕಾಡ್ ರೈಲ್ವೆ ವಿಭಾಗ ವಿಭಜನೆ ಹೆಸರಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಇದೇ ವೇಳೆ, ‘ರೈಲ್ವೆ ವಿಭಾಗ ವಿಭಜನೆಯಿಂದ ಕೇರಳದ ರೈಲ್ವೆ ಅಭಿವೃದ್ಧಿ ಯೋಜನೆಯ ಹೂಡಿಕೆಗೆ ಯಾವುದೇ ಅಡ್ಡಿ ಆಗುವುದಿಲ್ಲ. ಈಗಾಗಲೇ ರಾಜ್ಯಕ್ಕೆ ರೂಪಿಸಲಾಗಿರುವ ಎಲ್ಲಾ ಯೋಜನೆಗಳನ್ನು ಕೇಂದ್ರ ಸರ್ಕಾರ ಪೂರ್ಣಗೊಳಿಸಲಿದೆ. ನರೇಂದ್ರ ಮೋದಿ ಸರ್ಕಾರದ ಪರವಾಗಿ ನಾನು ಈ ಭರವಸೆ ನೀಡುತ್ತೇನೆ. ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಜಾರಿಗೊಳಿಸಬೇಕಾದ ಯೋಜನೆಗಳ ಬಗ್ಗೆ ಈಗಾಗಲೇ ನೀಲನಕ್ಷೆ ಸಿದ್ದಗೊಂಡಿದೆ. ಅದನ್ನು ಕೇಂದ್ರ ಸರ್ಕಾರ ಪೂರ್ಣಗೊಳಿಸಲಿದೆ. ರೈಲ್ವೆ ವಲಯ ವಿಭಜನೆಯಿಂದ ರಾಜ್ಯದ ಯಾವುದೇ ಯೋಜನೆಗೆ ಅಡ್ಡಿಯಾಗದು ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಭರವಸೆ ನೀಡಿದ್ದಾರೆ’ ಎಂದು ಹೇಳಿದರು. 

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 7 ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗಿದೆ, ಹೊಸ ವಂದೇ ಭಾರತ್‌ ರೈಲುಗಳ ಸೇವೆಯನ್ನು ರಾಜ್ಯಕ್ಕೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದ ಹೊರತಾಗಿಯೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಈ ಸವಲತ್ತುಗಳನ್ನು ಕಲ್ಪಿಸಿಲ್ಲವೇ’ ಎಂದು ರಾಜೀವ್‌ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡರು.