Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ ಅಲೆ ; ಪಾಸ್ಟರ್ ಆಂಡ್ರೂ ರಿಚರ್ಡ್‌ ಆಧ್ಯಾತ್ಮಿಕ ಸಂದೇಶಕ್ಕೆ ಸಾವಿರಾರು ಭಕ್ತರು ಸಾಕ್ಷಿ, ಪ್ರಕಾಶ್ ಹಲ್ಮಿಡಿ ಹಾಡುಗಳಿಗೆ ಮನಸೋತ ಮಂದಿ!

25-08-26 03:39 pm       HK News Staffer   ಕರ್ನಾಟಕ

ಪ್ರಾರ್ಥನೆಯ ಸದ್ದು, ಸ್ತುತಿ-ಆರಾಧನೆಯ ಗಾಯನ ಹಾಗೂ ಆಧ್ಯಾತ್ಮಿಕ ಸಂದೇಶದಿಂದ ಯಾದಗಿರಿ ನಗರದಲ್ಲಿ ಆಗಸ್ಟ್ 21-22 ಎರಡು ದಿನಗಳ ಕಾಲ ಉಜ್ಜೀವನದ ವಾತಾವರಣ ನಿರ್ಮಾಣವಾಗಿತ್ತು. ನಗರದ ಚಿರಂಜೀವಿ ಶಾಲಾ ಆವರಣದಲ್ಲಿ ಕ್ರೈಸ್ಟ್ ವರಿಯರ್ಸ್ ವತಿಯಿಂದ ಆಯೋಜಿಸಿದ್ದ ಉಜ್ಜೀವನ ಕೂಟಕ್ಕೆ ಯಾದಗಿರಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಸಾವಿರಾರು ಭಕ್ತರು ಹರಿದುಬಂದರು.

ಯಾದಗಿರಿ, ಆ 24: ಪ್ರಾರ್ಥನೆಯ ಸದ್ದು, ಸ್ತುತಿ-ಆರಾಧನೆಯ ಗಾಯನ ಹಾಗೂ ಆಧ್ಯಾತ್ಮಿಕ ಸಂದೇಶದಿಂದ ಯಾದಗಿರಿ ನಗರದಲ್ಲಿ ಆಗಸ್ಟ್ 21-22 ಎರಡು ದಿನಗಳ ಕಾಲ ಉಜ್ಜೀವನದ ವಾತಾವರಣ ನಿರ್ಮಾಣವಾಗಿತ್ತು. ನಗರದ ಚಿರಂಜೀವಿ ಶಾಲಾ ಆವರಣದಲ್ಲಿ ಕ್ರೈಸ್ಟ್ ವರಿಯರ್ಸ್ ವತಿಯಿಂದ ಆಯೋಜಿಸಿದ್ದ ಉಜ್ಜೀವನ ಕೂಟಕ್ಕೆ ಯಾದಗಿರಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಸಾವಿರಾರು ಭಕ್ತರು ಹರಿದುಬಂದರು. ರಾಜ್ಯದ ಖ್ಯಾತ ಬೋಧಕ ಪಾಸ್ಟರ್ ಆಂಡ್ರೂ ರಿಚರ್ಡ್ ಅವರ ಆಧ್ಯಾತ್ಮಿಕ ಸಂದೇಶ ಹಾಗೂ ಖ್ಯಾತ ಕ್ರೈಸ್ತ ಗಾಯಕ ಪ್ರಕಾಶ್ ಹಲ್ಮಿಡಿ ಅವರ ಸ್ತುತಿ-ಆರಾಧನೆಯ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

ಕಾರ್ಯಕ್ರಮದಲ್ಲಿ ಪಾಸ್ಟರ್ ಆಂಡ್ರೂ ರಿಚರ್ಡ್ ಅವರು ಆಧ್ಯಾತ್ಮಿಕ ಸಂದೇಶ ನೀಡಿದರು. ದೇವರ ಮೇಲಿನ ನಂಬಿಕೆ, ಪ್ರಾರ್ಥನೆಯ ಶಕ್ತಿ ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ವಿವರಿಸಿದ ಅವರು, ಪ್ರತಿಯೊಬ್ಬರೂ ನಂಬಿಕೆ ಮತ್ತು ಪ್ರಾರ್ಥನೆಯ ಮೂಲಕ ಜೀವನದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು. ಅವರ ಸಂದೇಶ ಭಕ್ತರಲ್ಲಿ ಆತ್ಮವಿಶ್ವಾಸ ಹಾಗೂ ಆಧ್ಯಾತ್ಮಿಕ ಚೈತನ್ಯ ಮೂಡಿಸಿತು. 

ಉಜ್ಜೀವನ ಕೂಟದ ಅಂಗವಾಗಿ ಮೆಥೋಡಿಸ್ಟ್ ಕೇಂದ್ರಿಯ ಚರ್ಚ್, ಯಾದಗಿರಿ ವತಿಯಿಂದ ಪಾಸ್ಟರ್ ಆಂಡ್ರೂ ಹಾಗೂ ಪ್ರಕಾಶ್ ಹಲ್ಮಿಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇನ್ನು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ವೆಂಕಟರೆಡ್ಡಿ ಮುದ್ನಾಳ್ ಹಾಗೂ ಬಿಜೆಪಿ ಮುಖಂಡ ರುದ್ರಪ್ಪ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅವರನ್ನೂ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಯಾದಗಿರಿ ಮೆಥೋಡಿಸ್ಟ್  ಸಭೆಯ ಜಿಲ್ಲಾ ಮೇಲ್ವಿಚಾರಕರಾದ ರೇವ. ಎಸ್. ನಂದಕುಮಾರ, ಶೋರಾಪುರದ ಡಿಎಸ್ ಪಾಸ್ಟರ್ ದೇವದಾನ್ ಆನಂದಪ್ಪ  ಸೇರಿದಂತೆ ವಿವಿಧ ಚರ್ಚ್ ಸೇವಕರನ್ನು ಗೌರವಿಸಲಾಯಿತು.  

ಯಾದಗಿರಿ ಬಿಜೆಪಿ ಮುಖಂಡ ಭೀಮಾಶಂಕರ ಸಾಕ್ಷಿ: 

ಇನ್ನು ಕಾರ್ಯಕ್ರಮದಲ್ಲಿ ಯಾದಗಿರಿ ಎಸ್ ಸಿ ಮೋರ್ಚಾದ,  ಬಿಜೆಪಿ ಜಿಲ್ಲಾಧ್ಯಕ್ಷ ಭೀಮಾಶಂಕರ ಬಿಲ್ಲವ ಗ್ರೇಸ್ ಮಿನಿಸ್ಟ್ರಿ ಮೂಲಕ ಪಡೆದ ಅದ್ಭುತವನ್ನು ಹಂಚಿಕೊಂಡರು. ಪ್ರತಿದಿನ ಯೌಟ್ಯೂಬ್ ನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಅವರು ಒಂದು ದಿನ ಫಾದರ್ ಅವರಿಗೆ ಕರೆ ಮಾಡಿ ತಮ್ಮ ಮಗಳಿಗೆ ಎಂಬಿಬಿಎಸ್ ಸೀಟ್ ಸಿಗುವಂತೆ ಪ್ರಾರ್ಥನ ಮನವಿ ಸಲ್ಲಿಸಿದ್ದರು. ಮೂರು ವಾರಗಳ ಅಂತರದಲ್ಲಿ ನಿಮ್ಮ ಮಗಳಿಗೆ ಮೆಡಿಕಲ್ ಸೀಟ್ ಸಿಗುತ್ತದೆ ಎಂದು ಫಾದರ್ ಭವಿಷ್ಯ ನುಡಿದಿದ್ದರು. ಫಾದರ್ ಅವರ ಭವಿಷ್ಯ ವಾಣಿಯ ಪ್ರಕಾರ ತಮ್ಮ ಮಗಳಿಗೆ ರಾಜ್ಯದ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟ್ ದೊರಕಿದೆ ಎಂದು ಸಾಕ್ಷಿ ಕೊಟ್ಟರು. ಕೊನೆಗೆ ಫಾದರ್ ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು. 

ಉಜ್ಜೀವನ ಕೂಟದಲ್ಲಿ ಪ್ರಾರ್ಥನೆ, ಸ್ತುತಿ-ಆರಾಧನೆ ಹಾಗೂ ಆಧ್ಯಾತ್ಮಿಕ ಸಂದೇಶಗಳ ಮೂಲಕ ಭಕ್ತರಲ್ಲಿ ಹೊಸ ಚೈತನ್ಯ ಮೂಡಿಸಲಾಯಿತು. ಯಾದಗಿರಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನೂರಾರು ಕುಟುಂಬಗಳು ಒಂದೇ ವೇದಿಕೆಯಲ್ಲಿ ಸೇರಿ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ಭಾಗವಹಿಸಿದ್ದು, ಉಜ್ಜೀವನ ಕೂಟದ ಪ್ರಮುಖ ಆಕರ್ಷಣೆಯಾಗಿತ್ತು.

ಎರಡು ದಿನ ಬಂದ ಸಾವಿರಾರು ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಇನ್ನು ಎರಡು ದಿನವು ಸಾಯಂಕಾಲ ಟ್ರಾಫಿಕ್ ಜಾಮ್ ಆಗಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ನಿಯಂತ್ರಣ ಮಾಡಲು ಯಾದಗಿರಿ ಸಂಚಾರಿ ಪೊಲೀಸರು ಹರಸಾಹಸ ಪಟ್ಟರು.

Thousands of believers gathered in Yadgir for a two-day revival meeting organized by Christ Warriors, featuring spiritual messages by Grace Ministry Pastor Bro Andrew Richard and praise and worship by Prakash Halmidi. Yadgir District Superintendent Rev. S. Nanda Kumar, along with the DS of Shorapur Rev Devadan Anandappa and several church ministers and Christian workers, were also honoured during the event.