ಸುಶಾಂತ್‌ ಕೊಲೆ ಮಾಡಲಾಗಿದೆ ; ಕುಟುಂಬಸ್ಥರಿಂದ ಪೊಲೀಸರ ವಿರುದ್ಧ ಆಕ್ರೋಶ

13-08-20 06:31 am       Headline Karnataka News Network   ದೇಶ - ವಿದೇಶ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ ದಿನ ಹೋದಂತೆ ಜಟಿಲವಾಗುತ್ತಿದೆ.

ಮುಂಬಯಿ, ಆಗಸ್ಟ್ 13: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ ದಿನ ಹೋದಂತೆ ಜಟಿಲವಾಗುತ್ತಿದೆ. ಅಲ್ಲದೆ, ಇದರಲ್ಲಿ ರಾಜ ಕೀಯವೂ ಬೆರೆತಿರುವುದು ಇನ್ನಷ್ಟು ಗೊಂದಲಗಳನ್ನು ಮೂಡಿಸುತ್ತಿದೆ. ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿರುವ ನಡುವೆಯೇ ಸುಶಾಂತ್‌ ಕುಟುಂಬವು ಬುಧವಾರ 9 ಪುಟಗಳ ಪತ್ರ ಬಿಡುಗಡೆ ಮಾಡಿದ್ದು, ಸುಶಾಂತ್‌ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದೆ. ಜತೆಗೆ, ಅವರ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದೂ ಕಿಡಿಕಾರಲಾಗಿದೆ.

ಸುಶಾಂತ್‌ರ ಬಾಲ್ಯದಿಂದ ಹಿಡಿದು ಕನಸಿನ ನಗರಿ ಮುಂಬಯಿಗೆ ತೆರಳಿ, ಬದುಕನ್ನು ಅಂತ್ಯಗೊಳಿಸುವವರೆಗೆ ಎಲ್ಲ ಮಾಹಿತಿಗಳನ್ನೂ ಆ ಪತ್ರದಲ್ಲಿ ವಿವರಿಸಲಾಗಿದೆ. ಜತೆಗೆ, ತಮ್ಮ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ, ಮುಂಬಯಿ ಪೊಲೀಸರು ತನಿಖೆಯಲ್ಲಿ ವಹಿಸಿದ ನಿರ್ಲಕ್ಷ್ಯದ ಕುರಿತೂ ಉಲ್ಲೇಖೀಸಲಾಗಿದೆ. ಅಲ್ಲದೆ, ರಿಯಾ ಮತ್ತವರ ಕುಟುಂಬ ಸದಸ್ಯರ ವಿರುದ್ಧವೂ ಕಿಡಿಕಾರಲಾಗಿದೆ.

ರಾವತ್‌ಗೆ ನೋಟಿಸ್‌ ಜಾರಿ: ಬಿಹಾರ ಶಾಸಕ ನೀರಜ್‌ ಕುಮಾರ್‌ ಬಬ್ಲು ಶಿವಸೇನೆ ಸಂಸದ ಸಂಜಯ್‌ ರಾವತ್‌ಗೆ ಕಾನೂನು ನೋಟಿಸ್‌ ಜಾರಿ ಮಾಡಿದ್ದಾರೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಸಾವಿನ ಕುರಿತು ಬರೆದಿದ್ದ ಲೇಖನದಲ್ಲಿ ರಾವತ್‌ ಆಕ್ಷೇಪಾರ್ಹವಾಗಿ ಬರೆದಿದ್ದರು ಎಂದು ಆರೋಪಿಸಲಾಗಿದೆ.

ಸಾವಿನ ನಂತರ ಫೇಮಸ್‌ ಆದರು!

ಸುಶಾಂತ್‌ ಸಾವಿಗೆ ಸಂಬಂಧಿಸಿ ರಾಜಕಾರಣಿಗಳ ಲೂಸ್‌ಟಾಕ್‌ ಮುಂದುವರಿದಿದೆ. ಸುಶಾಂತ್‌ ಅವರು ಸಾವಿನ ನಂತರ ಫೇಮಸ್‌ ಆದಷ್ಟು ಸಾವಿಗೂ ಮುನ್ನ ಆಗಿರಲಿಲ್ಲ ಎಂದು ಎನ್‌ಸಿಪಿ ನಾಯಕ ಮಜೀದ್‌ ಮೆಮನ್‌ ಬುಧವಾರ ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ, ಅವರ ಹೇಳಿಕೆಯಿಂದ ಪಕ್ಷ ದೂರ ಉಳಿದಿದೆ. ಇದು ಮೆಮನ್‌ ಅವರ ವೈಯಕ್ತಿಕ ಹೇಳಿಕೆಯಾ ಗಿದೆಯೇ ವಿನಾ ಪಕ್ಷದ್ದಲ್ಲ ಎಂದು ಎನ್‌ಸಿಪಿ ಸ್ಪಷ್ಟಪಡಿಸಿದೆ. ಜತೆಗೆ, ಮೆಮನ್‌ ಅವರೂ ಸ್ಪಷ್ಟನೆ ನೀಡಿ, ಸುಶಾಂತ್‌ರನ್ನು ಅವಮಾನಿಸುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.