ಅಯೋಧ್ಯೆ ; ರಾಮನ ಹೆಸರಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 

14-08-20 08:20 am       Headline Karnataka News Network   ದೇಶ - ವಿದೇಶ

ಅಯೋಧ್ಯೆ ವಿಮಾನ ನಿಲ್ದಾಣವನ್ನು ಜಾಗತಿಕ ದರ್ಜೆಗೆ ಏರಿಸಲಾಗುವುದು. ಏರ್‌ಪೋರ್ಟ್‌ಗೆ ಶ್ರೀರಾಮನ ಹೆಸರನ್ನು ಇಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ನಂದಗೋಪಾಲ್‌ ಗುಪ್ತಾ ನಂದಿ ತಿಳಿಸಿದ್ದಾರೆ. 

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆಯ ಮುನ್ನುಡಿ ಹಾಕಿದ್ದು ಅಯೋಧ್ಯೆಯ ಚಹರೆಯನ್ನು ಬದಲಿಸುತ್ತಿದೆ. ಇತ್ತೀಚೆಗಷ್ಟೇ ಇಲ್ಲಿನ ರೈಲ್ವೆ ನಿಲ್ದಾಣದ ಮರುವಿನ್ಯಾಸದ ಯೋಜನೆ ಪ್ರಕಟಿಸಿದ್ದ ಸರಕಾರ, ಇದೀಗ ಅಯೋಧ್ಯೆ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ನಿರ್ಧರಿಸಿದೆ.

ಸದ್ಯ ಅಯೋಧ್ಯೆಯಲ್ಲಿರುವ ಸಣ್ಣ ವಿಮಾನ ನಿಲ್ದಾಣ ಅಭಿವೃದ್ಧಿಗಾ ಈ ಹಿಂದೆ 285 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ, ಈಗ 600 ಎಕರೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ವಿಸ್ತರಿಸಲು ಉತ್ತರ ಪ್ರದೇಶ ರಾಜ್ಯ ಸರಕಾರ ನಿರ್ಧರಿಸಿದೆ. ಈಗಾಗಲೇ ಅಯೋಧ್ಯೆ ಏರ್‌ಪೋರ್ಟ್‌ಗೆ 525 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ.

ವಿಮಾನ ನಿಲ್ದಾಣಕ್ಕೆ ರಾಮನ ಹೆಸರು ! 

ಅಯೋಧ್ಯೆಗೆ ಭೇಟಿ ನೀಡಿದ್ದ ನಾಗರಿಕ ವಿಮಾನಯಾನ ಸಚಿವ ನಂದಗೋಪಾಲ್‌ ಗುಪ್ತಾ ನಂದಿ, “ಅಯೋಧ್ಯೆ ವಿಮಾನ ನಿಲ್ದಾಣವನ್ನು ಜಾಗತಿಕ ದರ್ಜೆಗೆ ಏರಿಸಲಾಗುವುದು. ಏರ್‌ಪೋರ್ಟ್‌ಗೆ ಶ್ರೀರಾಮನ ಹೆಸರನ್ನು ಇಡಲಾಗುವುದು’ ಎಂದು ತಿಳಿಸಿದ್ದಾರೆ. 

ಆದಷ್ಟು ಬೇಗ ಏರ್‌ಪೋರ್ಟ್‌ ಕಾಮಗಾರಿ ಪೂರ್ಣಗೊಳಿಸಲಾಗುವುದು. ಆಬಳಿಕ ಜಗತ್ತಿನ ಪ್ರಮುಖ ನಗರಗಳಿಗೆ ಅಯೋಧ್ಯೆಯಿಂದ ನೇರ ವಿಮಾನ ಸಂಪರ್ಕ ಕಲ್ಪಿಸಲಾಗುತ್ತದೆ. 777 ಬೋಯಿಂಗ್‌ ಮತ್ತು ಡಬಲ್‌ ಡೆಕ್ಕರ್‌ ವಿಮಾನಗಳಿಗೆ ಲ್ಯಾಂಡಿಂಗ್‌ ಸೌಲಭ್ಯದ ಸಾಮರ್ಥ್ಯ ಬರಲಿದೆ. ರಾಮಮಂದಿರ ನಿರ್ಮಾಣದ ಜೊತೆ ಜೊತೆಗೆ ವಿಮಾನ ನಿಲ್ದಾಣದ ಮೊದಲ ಹಂತದ ಯೋಜನೆಗಳೂ ಪೂರ್ಣಗೊಳ್ಳಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್‌) ಅಡಿ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಈ ಹಿಂದೆಯೇ ಉತ್ತರ ಪ್ರದೇಶ ಸರಕಾರ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ ಅದನ್ನು ನವೀಕರಿಸಲಾಗಿದ್ದು ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಿಸಲು ನಿರ್ಧರಿಸಲಾಗಿದೆ.