ಹಾಂಕಾಂಗ್‌ನ ಮನ ಗೆಲ್ಲುವ ಪ್ರಯತ್ನ - ಎಲ್ಲಾ ನಾಗರಿಕರಿಗೆ ಉಚಿತ ಕೊರೊನಾ ವೈರಸ್ ಪರೀಕ್ಷೆ

22-08-20 11:20 am       Headline Karnataka News Network   ದೇಶ - ವಿದೇಶ

ಹಾಂಕಾಂಗ್‌ನ್ನು ಆಪೋಷಣ ಪಡೆದಿರುವ ಚೀನಾ, ಇದೀಗ ಅಲ್ಲಿನ ನಾಗರಿಕರ ಮನ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ. ನಾಗರಿಕರಿಗೆ ಉಚಿತ ಕೊರೊನಾ ವೈರಸ್ ಪರೀಕ್ಷೆ ಮಾಡಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ಹಾಂಕಾಂಗ್: ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾನೂನು ಜಾರಿಗೊಳಿಸಿ ಹಾಂಕಾಂಗ್‌ನ್ನು ಆಪೋಷಣ ಪಡೆದಿರುವ ಚೀನಾ, ಇದೀಗ ಅಲ್ಲಿನ ನಾಗರಿಕರ ಮನ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ.

ಇದಕ್ಕೆ ಪುಷ್ಠಿ ಎಂಬಂತೆ ಹಾಂಕಾಂಗ್‌ನ ಎಲ್ಲಾ ನಾಗರಿಕರಿಗೆ ಉಚಿತ ಕೊರೊನಾ ವೈರಸ್ ಪರೀಕ್ಷೆ ಮಾಡಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ಹಾಂಕಾಂಗ್‌ನ ಎಲ್ಲಾ 7.5 ಮಿಲಿಯನ್ ನಾಗರಿಕರಿಗೂ ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಲು ಸ್ಥಳೀಯ ಆಡಳಿತ ಸಜ್ಜಾಗಿದೆ ಎಂದು ಹೇಳಲಾಗಿದೆ.

ಮುಂದಿನ ಸೆಪ್ಟೆಂಬರ್ 1 ರಿಂದ ಎರಡು ವಾರಗಳ ಕಾಲ ಹಾಂಕಾಂಗ್‌ನ ಎಲ್ಲಾ ನಾಗರಿಕರನ್ನೂ ಉಚಿತವಾಗಿ ಕೊರೊನಾ ಪರೀಕ್ಷೆಗೆ ಗುರಿಪಡಿಸಲಾಗುವುದು ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ.

ಆದರೆ ಹಾಂಕಾಂಗ್ ಆರೋಗ್ಯ ಸಚಿವೆ ಸೋಫಿಯಾ ಚಾನ್ ಉಚಿತ ಕೊರೊನಾ ಪರೀಕ್ಷೆಯಲ್ಲಿ ಅಂದಾಜು 5 ಮಿಲಿಯನ್ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಇನ್ನು ಚೀನಾದ ಈ ನಿರ್ಧಾರವನ್ನು ಹಾಂಕಾಂಗ್ ಜನತೆಯ ಮನವೋಲಿಸುವ ಹುನ್ನಾರ ಎಂದು ಹೇಳಿರುವ ವಿರೋಧ ಪಕ್ಷಗಳು, ಇಂತಹ ತಂತ್ರಗಳಿಂದ ಹಾಂಕಾಂಗ್ ಜನತೆಯ ಮನ ಗೆಲ್ಲಲು ಸಾಧ್ಯವಿಲ್ಲ ಎಂದು ಕಿಡಿಕಾರಿವೆ.