ತಕ್ಷಣವೇ ಹೊಸ ಅಧ್ಯಕ್ಷರನ್ನು ನೇಮಿಸಿಕೊಳ್ಳಿ : ಸೋನಿಯಾಗಾಂಧಿ

23-08-20 08:08 pm       Headline Karnataka News Network   ದೇಶ - ವಿದೇಶ

ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಲು ಸೋನಿಯಾ ಗಾಂಧಿ ತೀರ್ಮಾನಿಸಿದ್ದಾರೆ. ಎಲ್ಲರೂ ಒಗ್ಗೂಡಿ, ಹೊಸ ಮುಖ್ಯಸ್ಥರನ್ನು ಹುಡುಕಿ’ ಎಂದಿದ್ದಾರೆಂದು ವರದಿಯಾಗಿದೆ. ಅವರಿಗೆ ಆ ಹುದ್ದೆಯಲ್ಲಿ ಮುಂದುವರೆಯುವ ಇಚ್ಛೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ನವದೆಹಲಿ, ಆಗಸ್ಟ್.23: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಲು ಸೋನಿಯಾ ಗಾಂಧಿ ತೀರ್ಮಾನಿಸಿದ್ದಾರೆ. ಅಧ್ಯಕ್ಷ ಸ್ಥಾನ ತ್ಯಜಿಸಲು ತೀರ್ಮಾನಿಸಿದ್ದು, ತಕ್ಷಣವೇ ಹೊಸ ಅಧ್ಯಕ್ಷರನ್ನು ನೇಮಿಸಿಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸೋನಿಯಾ ಸೂಚಿಸಿದ್ದಾರೆ.

ತಾವು ಹಂಗಾಮಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದೇವೆ, ಇನ್ಮುಂದೆ ಪಕ್ಷದ ಸಂವಿಧಾನ ಪ್ರಕಾರ, ಹೊಸ ಅಧ್ಯಕ್ಷರ ನೇಮಕವಾಗಬೇಕಾಗಿದೆ. ತಕ್ಷಣವೇ ಆಯ್ಕೆ ಪ್ರಕ್ರಿಯೆ ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅತ್ಯುನ್ನತ ಸಮಿತಿಯಾಗಿದೆ.

ನಾಳೆ ಈ ಸಮಿತಿ ಸಭೆ ನಿಗದಿಯಾಗಿದ್ದು, ಸೋನಿಯಾ ಸೂಚನೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿಯೇ ಮತ್ತೆ ಅಧ್ಯಕ್ಷರಾಗೋ ಸಾಧ್ಯತೆ ಇದೆ. ಈ ಮಧ್ಯೆ 23ಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ಸಿಗರು, ಗಾಂಧಿ ಕುಟುಂಬೇತರ ಸದಸ್ಯರನ್ನು ಪಕ್ಷಾಧ್ಯಕ್ಷರನ್ನಾಗಿ ಆರಿಸಬೇಕು. ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಪತ್ರ ಬರೆದಿದ್ದಾರೆ. ಈ ಕಾರಣದಿಂದಾಗಿ, ನಾಳೆ ನಡೆಯಲಿರೋ ಸಿಡಬ್ಲ್ಯುಸಿ ಸಭೆ ಕಾಂಗ್ರೆಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.