ಚಿಪ್ಕೋ ಚಳವಳಿಯ ನೇತಾರ ಸುಂದರ್ ಲಾಲ್ ಬಹುಗುಣ ಇನ್ನಿಲ್ಲ

21-05-21 02:00 pm       Headline Karnataka News Network   ದೇಶ - ವಿದೇಶ

ಚಿಪ್ಕೋ ಚಳವಳಿಯ ನೇತಾರ, ದೇಶ ಕಂಡ ಖ್ಯಾತ ಪರಿಸರ ಹೋರಾಟಗಾರ ಪದ್ಮಶ್ರೀ ಪುರಸ್ಕೃತ ಸುಂದರ್ ಲಾಲ್ ಬಹುಗುಣ ಕೊರೊನಾ ಸೋಂಕಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ.

Photo credits : The Better India

ನವದೆಹಲಿ, ಮೇ 21: ಚಿಪ್ಕೋ ಚಳವಳಿಯ ನೇತಾರ, ದೇಶ ಕಂಡ ಖ್ಯಾತ ಪರಿಸರ ಹೋರಾಟಗಾರ ಪದ್ಮಶ್ರೀ ಪುರಸ್ಕೃತ ಸುಂದರ್ ಲಾಲ್ ಬಹುಗುಣ(93) ಕೊರೊನಾ ಸೋಂಕಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಅವರನ್ನು ರಿಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನ್ಯುಮೋನಿಯಾ ಮತ್ತು ಮಧುಮೇಹದ ಜೊತೆಗೆ ಕೊರೊನಾ ಸೋಂಕು ತಗುಲಿದ್ದುದರಿಂದ ಅವರ ದೇಹಸ್ಥಿತಿ ಬಿಗಡಾಯಿಸಿತ್ತು.

1970- 80ರ ದಶಕದಲ್ಲಿ ಚಿಪ್ಕೋ (ಹಿಂದಿಯಲ್ಲಿ ಅಪ್ಪಿಕೋ ಎಂದರ್ಥ) ಚಳವಳಿಯ ಮೂಲಕ ಉತ್ತರ ಭಾರತದಲ್ಲಿ ಮರ, ಅರಣ್ಯವನ್ನು ಉಳಿಸಲು ಆಂದೋಲನ ರೂಪಿಸಿದ್ದ ಸುಂದರ್ ಲಾಲ್ ಬಹುಗುಣ, ದೇಶ ಕಂಡ ಅತ್ಯಂತ ಅಪರೂಪದ ಪರಿಸರ ಹೋರಾಟಗಾರ.

ಉತ್ತರಾಖಂಡ ರಾಜ್ಯದ ತೆಹ್ರಿಯಲ್ಲಿ 1927ರ ಜನವರಿ 9ರಂದು ಜನಿಸಿದ್ದ ಬಹುಗುಣ ಸ್ವಾತಂತ್ರ್ಯ ಹೋರಾಟಗಾರ. ಮಹಾತ್ಮ ಗಾಂಧಿಯಿಂದ ಪ್ರೇರಣೆ ಪಡೆದು ಹಿಮಾಲಯದ ಕುರಿತ ಅಧ್ಯಯನಕ್ಕಾಗಿ 4700 ಕಿಮೀ ಉದ್ದದ ಹಿಮಾಲಯ ಶ್ರೇಣಿಯನ್ನು ನಡೆದುಕೊಂಡೇ ಸಾಗಿದ್ದರು. ಅಲ್ಲಲ್ಲಿ ವಿವಿಧ ಜಲವಿದ್ಯುತ್ ಯೋಜನೆ, ಇನ್ನಿತರ ಕಾಮಗಾರಿಗಳಿಂದಾಗಿ ಹಿಮಾಲಯ ಶ್ರೇಣಿಯಲ್ಲಿ ಆಗಿರುವ ಬದಲಾವಣೆ, ಪರಿಸರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದ್ದರು.

1974ರ ಮಾರ್ಚ್ 27ರಂದು ಉತ್ತರ ಪ್ರದೇಶದಲ್ಲಿ ಚಿಪ್ಕೋ ಹೆಸರಲ್ಲಿ ಅರಣ್ಯ ಉಳಿವಿಗಾಗಿ ಆಂದೋಲನ ರೂಪಿಸಿದ್ದರು. ಮರಗಳನ್ನು ಅಪ್ಪಿಕೊಂಡು ಇದನ್ನು ಕಡಿಯದಿರಿ, ಇದೇ ಮರಗಳು ನಮ್ಮ ಜೀವ ಎನ್ನುತ್ತಲೇ ಜನರನ್ನು ಅರಣ್ಯ ರಕ್ಷಣೆಗಾಗಿ ಚಳವಳಿಗೆ ಇಳಿಯುವಂತೆ ಪ್ರೇರೇಪಿಸಿದ್ದರು. ನಮ್ಮ ಪರಿಸರ ನಮ್ಮ ಶಾಶ್ವತ ಆರ್ಥಿಕತೆ ಎನ್ನುವ ಹೆಸರಲ್ಲಿ ಜನರಲ್ಲಿ ಮರಗಳು ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿಸಿದ್ದರು. 1980 - 83ರ ಅವಧಿಯಲ್ಲಿ ಹಿಮಾಲಯ ಶ್ರೇಣಿಯುದ್ದಕ್ಕೂ ಪ್ರತಿ ಗ್ರಾಮ ಗ್ರಾಮಕ್ಕೂ ತೆರಳಿ ಜನರಲ್ಲಿ ಅರಿವು ಮೂಡಿಸಿದ್ದರು. ಬುಹುಗುಣ ಅವರ ಚಿಪ್ಕೋ ಚಳವಳಿಗೆ ಜನರು ಭಾರೀ ಬೆಂಬಲ ವ್ಯಕ್ತಪಡಿಸಿದ್ದರು.

ಬಹುಗುಣ ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿಯನ್ನು ಭೇಟಿಯಾಗಿ ಮರಗಳ ಮಹತ್ವವನ್ನು ವಿವರಿಸಿದರು. ಇದರ ಪರಿಣಾಮ 1980ರಲ್ಲಿ ಇಂದಿರಾ ಗಾಂಧಿ ದೇಶಾದ್ಯಂತ ಹಸಿರು ಮರಗಳನ್ನು ಕಡಿಯದಂತೆ 15 ವರ್ಷ ನಿಷೇಧ ಹಾಕಿದ್ದು ಕ್ರಾಂತಿಕಾರಿ ನಡೆಯಾಗಿತ್ತು.

ತೆಹ್ರಿಯಲ್ಲಿ ನಡೆಯುತ್ತಿದ್ದ ಬೃಹತ್ ಅಣೆಕಟ್ಟು ವಿರೋಧಿಸಿ ಭಾಗೀರಥಿ ನದಿ ದಂಡೆಯಲ್ಲಿ ನಿರಶನ ಸತ್ಯಾಗ್ರಹ ನಡೆಸಿಯೂ ಕೇಂದ್ರ ಸರಕಾರದ ಗಮನ ಸೆಳೆದಿದ್ದರು. 1995ರಲ್ಲಿ 45 ದಿನಗಳ ನಿರಶನ ಸತ್ಯಾಗ್ರಹದ ಬಳಿಕ ಪ್ರಧಾನಿ ನರಸಿಂಹ ರಾವ್, ಬಹುಗುಣ ಅವರನ್ನು ಕರೆದು ಪರಿಸರ ಅಧ್ಯಯನಕ್ಕೆ ತಜ್ಞರ ಸಮಿತಿಯನ್ನು ನೇಮಕ ಮಾಡಿದ್ದರು. 1997ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ ದೆಹಲಿಯ ಗಾಂಧಿ ಪ್ರತಿಮೆಯ ಮುಂದೆ 74 ದಿನಗಳ ಉಪವಾಸ ನಡೆಸಿದ್ದರು. ಸುದೀರ್ಘ ನ್ಯಾಯಾಲಯದ ಹೋರಾಟದ ಬಳಿಕ 2001ರಲ್ಲಿ ತೆಹ್ರಿ ಡ್ಯಾಮ್ ಕಾಮಗಾರಿ ಆರಂಭಗೊಂಡಿತ್ತು. ಸುಂದರ್ ಲಾಲ್ ಬಹುಗುಣ ಕೊನೆಗೆ ಪೊಲೀಸರ ಸೆರೆಯಾಗಿದ್ದರು. 

Photo Gallery: ಚಿಪ್ಕೋ ಚಳವಳಿಯ ನೇತಾರ ಸುಂದರ್ ಲಾಲ್ ಬಹುಗುಣ

Sundarlal Bahuguna, the environmentalist behind Chipko Movement, died on Friday at the age of 94. He was admitted to AIIMS Rishikesh on May 8 for treatment of Covid-19. According to local reports, he was suffering from pneumonia and had diabetes, which is considered comorbidity in coronavirus cases.