ಅನ್ ಲಾಕ್ 4.0 - ಶಾಲೆ, ಕಾಲೇಜಿಗಿಲ್ಲ ಅವಕಾಶ ; ಮೆಟ್ರೋ, ನಾನ್ ಎಸಿ ಥೇಟರ್, ಸಭೆಗಳಿಗೆ ಗ್ರೀನ್ ಸಿಗ್ನಲ್ !

30-08-20 09:09 am       Headline Karnataka News Network   ದೇಶ - ವಿದೇಶ

ಕೊರೊನಾ ಲಾಕ್ ಡೌನ್ ನಿಯಂತ್ರಣವನ್ನು ಹಂತ ಹಂತವಾಗಿ ಸಡಿಲಗೊಳಿಸುತ್ತಿರುವ ಕೇಂದ್ರ ಸರಕಾರ ಅನ್ ಲಾಕ್ 4.0 ಬಿಡುಗಡೆ ಮಾಡಿದೆ. ಅನ್ಲಾಕ್ 4 .0 ಮಾರ್ಗಸೂಚಿಯಲ್ಲೇನಿದೆ ಗೊತ್ತಾ!!

ನವದೆಹಲಿ, ಆಗಸ್ಟ್ 30: ಕೊರೊನಾ ಲಾಕ್ ಡೌನ್ ನಿಯಂತ್ರಣವನ್ನು ಹಂತ ಹಂತವಾಗಿ ಸಡಿಲಗೊಳಿಸುತ್ತಿರುವ ಕೇಂದ್ರ ಸರಕಾರ ಅನ್ ಲಾಕ್ 4.0 ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 7ರ ನಂತರ ದೇಶಾದ್ಯಂತ ಮೆಟ್ರೊ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಕೇಂದ್ರ, ಶಾಲೆ, ಕಾಲೇಜು ಸೆಪ್ಟೆಂಬರ್ 30ರ ವರೆಗೂ ತೆರೆಯಲು ಅನುಮತಿ ನೀಡಿಲ್ಲ. 

ಸೆಪ್ಟೆಂಬರ್ 21ರ ಬಳಿಕ ಸಭೆ, ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ ನೂರು ಜನರಿಗೆ ಸೀಮಿತ ಆಗಿರಬೇಕು. ಇದರಂತೆ ರಾಜಕೀಯ ಸಭೆಗಳು, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ಸಿಗಲಿದೆ. ಹಾಗೆಯೇ ಹವಾನಿಯಂತ್ರಣ ರಹಿತ ಸಿನಿಮಾ ಟಾಕೀಸ್ ತೆರೆಯುವುದಕ್ಕೂ ಅವಕಾಶ ನೀಡಲಾಗಿದೆ. ಇನ್ನು ಕಂಟೈನ್ಮೆಂಟ್ ಝೋನಲ್ಲಿ ನಿರ್ಬಂಧ ಯಥಾಸ್ಥಿತಿ  ಮುಂದುವರಿಯಲಿದೆ. ಉಳಿದಂತೆ ಅಗತ್ಯ ಬಿದ್ದರೆ ಹೆಚ್ಚುವರಿ ಲಾಕ್ ಡೌನ್ ಹೇರುವುದಕ್ಕೆ ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಲಾಗಿದೆ. ಅಲ್ಲದೆ, ಅಂತಾರಾಜ್ಯ ಸಂಚಾರವನ್ನು ಸಂಪೂರ್ಣ ಮುಕ್ತಗೊಳಿಸಲಾಗಿದೆ. ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಬಾರದು, ಜೊತೆಗೆ ಪ್ರತ್ಯೇಕವಾಗಿ ಇ- ಪಾಸ್ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ. 

ಇನ್ನು ಶಾಲೆ, ಕಾಲೇಜನ್ನು ಸೆಪ್ಟೆಂಬರ್ 30 ರ ವರೆಗೆ ತೆರೆಯುವಂತಿಲ್ಲ. ಅನ್ ಲೈನ್ ಕ್ಲಾಸ್ ನಡೆಸುವುದಿದ್ದರೆ ಶಿಕ್ಷಣ ಸಂಸ್ಥೆಗಳು 50 ಶೇ. ಸಿಬಂದಿಯನ್ನು ಕರೆಸಿಕೊಳ್ಳಬಹುದು. ಈ ಸೌಲಭ್ಯ ಕಂಟೈನ್ಮೆಂಟ್ ವಲಯದಿಂದ ಹೊರಗಿನ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಲಿದೆ. ಇನ್ನು 9ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಬೋಧನೆ, ನೋಟ್ಸ್ ವಿಚಾರದಲ್ಲಿ ಶಿಕ್ಷಕರ ಜೊತೆ ವ್ಯವಹರಿಸಲು ಶಾಲೆ ಅಥವಾ ಕಾಲೇಜಿಗೆ ತೆರಳಲು ಅವಕಾಶ ನೀಡಲಾಗಿದೆ. ಆದರೆ ಪೋಷಕರ ಪರ್ಮಿಶನ್ ಪಡೆದೇ ಶಾಲೆ, ಕಾಲೇಜಿಗೆ ತೆರಳುವಂತೆ ಸೂಚಿಸಲಾಗಿದೆ.