ಮೈಸೂರಲ್ಲಿ ತಯಾರಾದ ದೇಶದ ಮೊದಲ ಹೈಸ್ಪೀಡ್ ರೈಲು ಚಕ್ರ!!

30-08-20 04:22 pm       Headline Karnataka News Network   ದೇಶ - ವಿದೇಶ

160 ಕಿ.ಮೀ.ವೇಗದಲ್ಲಿ ಚಲಿಸಲು ಸೂಕ್ತವಾದ ಹೈಸ್ಪೀಡ್ ಮೆಮೊ ಮೋಟಾರ್ ಕೋಚ್ ವೀಲ್ ನನ್ನು ಮೊದಲ ಬಾರಿಗೆ ಮೈಸೂರಿನಲ್ಲಿ ತಯಾರು ಮಾಡಲಾಗಿದೆ

ಮೈಸೂರು, ಆಗಸ್ಟ್ 30: ನೈಋತ್ಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ಹೈಸ್ಪೀಡ್ ಮೆಮು ಮೋಟಾರ್ ಕೋಚ್ ವ್ಹೀಲ್‌ ಅನ್ನು ಯಶಸ್ವಿಯಾಗಿ ತಯಾರು ಮಾಡಿದ್ದು  ಮೈಸೂರಿನ ವ್ಹೀಲ್ ಶಾಪ್ ಇದನ್ನು ತಯಾರಿಸಿದೆ.

160 ಕಿ. ಮೀ. ವೇಗದಲ್ಲಿ ಚಲಿಸಲು ಸೂಕ್ತವಾದ ಹೈಸ್ಪೀಡ್ ಮೆಮು ಮೋಟಾರ್ ಕೋಚ್ ವ್ಹೀಲ್ ಅನ್ನು ತಯಾರು ಮಾಡಲಾಗಿದೆ. ಇಂತಹ ಚಕ್ರಗಳನ್ನು ಮೊದಲ ಬಾರಿಗೆ ಭಾರತೀಯ ರೈಲ್ವೆ ಕಾರ್ಯಾಗಾರದಲ್ಲಿ ತಯಾರು ಮಾಡಲಾಗಿದ್ದು ಶ್ಲಾಘನೀಯ.

ಮೇಸರ್ಸ್ ಬೊಂಬಾರ್ಡಿಯರ್ ಟ್ರಾನ್ಸ್‌ಪೋರ್ಟೇಶನ್ ಭಾರತದಲ್ಲಿ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್ ರೇಕ್‌ಗಳಿಗಾಗಿ ಈ ರೀತಿಯ ಇಎಂಯು ಅಸೆಂಬ್ಲಿಗಳನ್ನು ಬಳಕೆ ಮಾಡುತ್ತದೆ. ಇಂತಹ ಚಕ್ರಗಳ ತಯಾರಿಕೆ ಯೋಜನೆಯನ್ನು ಮೊದಲ ಬಾರಿಗೆ ಆರಂಭಿಸಲಾಗಿದೆ.

ಬಿಇಎಂಎಲ್ 225 ಟೈಲರ್ ಕೋಚ್‌ ಕಾರುಗಳಿಗೆ 900 ಟೈಲರ್ ಕೋಚ್ ವ್ಹೀಲ್ ಸೆಟ್‌ಗಳನ್ನು ಮತ್ತು 75 ಮೋಟಾರ್ ಕೋಚ್ ಕಾರುಗಳಿಗೆ 300 ಮೋಟಾರ್ ಕೋಚ್, ವ್ಹೀಲ್ ಸೆಟ್‌ಗಳನ್ನು ತಯಾರು ಮಾಡಲು ಬೇಡಿಕೆ ಸಲ್ಲಿಸಿತ್ತು.

ಗಾಜಿಯಾಬಾದ್ ಮತ್ತು ದೆಹಲಿ ನಡುವೆ ಸಂಚಾರ ನಡೆಸುವ ರೈಲುಗಳಿಗಾಗಿ ಈ ವ್ಹೀಲ್‌ಗಳನ್ನು ಬಳಕೆ ಮಾಡಲಾಗುತ್ತದೆ. ಬಿಇಎಂಎಲ್ ಈ ಗಾಲಿಗಳಿಗೆ ಅನುಗುಣವಾಗಿ ರೈಲು ಬೋಗಿಯನ್ನು ತಯಾರು ಮಾಡುತ್ತಿದೆ.

ಮೊದಲ ಹಂತದಲ್ಲಿ 6 ವ್ಹೀಲ್ ಸೆಟ್‌ಗಳನ್ನು ಬಿಇಎಂಎಲ್‌ಗೆ ರವಾನಿಸಲು ಸಿದ್ದವಾಗಿದ್ದು  ಇವುಗಳ ವೆಚ್ಚ 2.4 ಕೋಟಿ ರೂ.ಗಳು. ಪಿಸಿಎಂಇ ರವಿ ಕುಮಾರ ಮಾರ್ಗದರ್ಶನದಲ್ಲಿ ಮೈಸೂರು ಕಾರ್ಯಾಗಾರದ ವ್ಯವಸ್ಥಾಪಕ ಟಿ.ಶ್ರೀನಿವಾಸು ಈ ಕೆಲಸವನ್ನು ಮೊದಲ ಬಾರಿಗೆ ಕೈಗೊಂಡಿದ್ದಾರೆ.