ನ್ಯಾಯಾಂಗ ನಿಂದನೆ ಕೇಸ್ : ಪ್ರಶಾಂತ್ ಭೂಷಣ್ ಗೆ ಒಂದು ರೂಪಾಯಿ ದಂಡ ವಿಧಿಸಿದ ಸುಪ್ರೀಂ ಕೋರ್ಟ್

31-08-20 01:44 pm       Headline Karnataka News Network   ದೇಶ - ವಿದೇಶ

ಅಡ್ವೊಕೇಟ್ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರೂ.೧ ದಂಡ ವಿಧಿಸಿದೆ

ನವದೆಹಲಿ, ಆಗಸ್ಟ್.31:  ಅಡ್ವೊಕೇಟ್ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್  ರೂ.೧ ದಂಡ ವಿಧಿಸಿದ್ದು, ಸೆಪ್ಟೆಂಬರ್ 5 ರೊಳಗೆ ದಂಡವನ್ನು ಪಾವತಿಸಬೇಕು ಇಲ್ಲವಾದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅಥವಾ ಮೂರು ವರ್ಷಗಳ ಕಾಲ ವಕೀಲ ವೃತ್ತಿಯನ್ನು ನಿಷೇಧಿಸಬೇಕು   ಎಂದು ಕೋರ್ಟ್ ಆದೇಶ ನೀಡಿದೆ. 

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಶಿಕ್ಷೆಯನ್ನು ವಿಧಿಸಲಾಗಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿ ಅಡ್ವೊಕೇಟ್ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದು ವಿವಾದವೆಬ್ಬಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಅವರನ್ನು ಅಪರಾಧಿ ಎಂದು ತೀರ್ಮಾನ ಮಾಡಿ ಕ್ಷಮೆ ಕೋರುವಂತೆ ಸೂಚಿಸಿತ್ತು. ಆದರೆ  ಅವರು ಕ್ಷಮೆ ಕೋರಲು ನಿರಾಕರಿಸಿದ್ದರು.

ನಂತರ ಆಗಸ್ಟ್ 25ರಂದು ಅಡ್ವೊಕೇಟ್ ಪ್ರಶಾಂತ್ ಭೂಷಣ್ ಪರ ವಕೀಲ ರಾಜೀವ್ ಧವನ್, ನ್ಯಾಯಾಲಯ ತನ್ನ ತೀರ್ಪನ್ನು ಹಿಂತೆಗೆದುಕೊಂಡು ನ್ಯಾಯಾಂಗ ನಿಂದನೆ ಆರೋಪಕ್ಕೆ ಯಾವುದೇ ಶಿಕ್ಷೆ ವಿಧಿಸದಂತೆ ಕೋರಿದ್ದರು.