ಮಾಜಿ ರಾಷ್ಟ್ರಪತಿ, ರಾಜಕೀಯ ಮುತ್ಸದ್ಧಿ ಪ್ರಣಬ್‌ ಮುಖರ್ಜಿ ಇನ್ನಿಲ್ಲ!

31-08-20 06:15 pm       Headline Karnataka News Network   ದೇಶ - ವಿದೇಶ

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ದೆಹಲಿ, ಆಗಸ್ಟ್ 31:  ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ  84 ವರ್ಷದ ಪ್ರಣಬ್ ಮುಖರ್ಜಿ ಅವರನ್ನು ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರೆಲ್ (ಆರ್ ಅಂಡ್ ಆರ್) ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಮಸ್ಯೆ ಉದ್ಭವವಾಗಿತ್ತು. ಹೀಗಾಗಿ ಪ್ರಣಬ್ ಅವರಿಗೆ ತುರ್ತಾಗಿ ಮಿದುಳು ಚಿಕಿತ್ಸೆಯನ್ನು ಮಾಡಲಾಗಿತ್ತು.

ಆದರೆ, ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೋನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿತ್ತು. ಆದರೂ ಮಿದುಳು ಶಸ್ತ್ರ ಚಿಕಿತ್ಸೆಯನ್ನು ಮುಗಿಸಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್ ಸಪೋರ್ಟ್) ಮಾಡುವ ಮೂಲಕ ತೀವ್ರ ನಿಗಾ ವಹಿಸಲಾಗಿತ್ತು. ಈ ವೇಳೆ ಅವರು ಶಾಶ್ವತ ಕೋಮಾಕ್ಕೆ ಜಾರಿದ್ದರು.

ಬಂಗಾಳದಲ್ಲಿ 1935, ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಮುಖರ್ಜಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. 2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ರಾಷ್ಟ್ರಪತಿಗಳಾಗುವ ಮುನ್ನ ಅವರು ವಿದೇಶಾಂಗ ಸಚಿವ, ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಅವರು ರಾಷ್ಟ್ರಪತಿ ಅಧಿಕಾರ ಪೂರ್ಣಗೊಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು.