ನನ್ನ ಟ್ವೀಟ್ ಗಳು ಸುಪ್ರೀಂ ಕೋರ್ಟನ್ನು ಅಗೌರವಗೊಳಿಸುವ ಉದ್ದೇಶವನ್ನು ಹೊಂದಿರಲಿಲ್ಲ: ಪ್ರಶಾಂತ್ ಭೂಷಣ್

01-09-20 07:02 am       Headline Karnataka News Network   ದೇಶ - ವಿದೇಶ

ವಾಕ್ ಸ್ವಾತಂತ್ರ್ಯಕ್ಕೆ ಅಭೂತಪೂರ್ವ ಗಳಿಗೆಯಾಗಿದೆ ಮತ್ತು ಅನ್ಯಾಯದ ವಿರುದ್ಧ ಮಾತನಾಡಲು ಹಲವರನ್ನು ಪ್ರೇರೇಪಿಸಿದೆ ಎಂದ ಪ್ರಶಾಂತ್ ಭೂಷಣ್

ಹೊಸದಿಲ್ಲಿ, ಸೆಪ್ಟೆಂಬರ್.1: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ 1 ರೂ. ದಂಡ ವಿಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಾತನಾಡಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಗೌರವಯುತವಾಗಿ ದಂಡವನ್ನು ಪಾವತಿಸುವುದಾಗಿ ಹೇಳಿದ್ದಾರೆ.

ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಗೌರವಯುತವಾಗಿ ಸ್ವೀಕರಿಸಿದ್ದೇನೆ. ನನ್ನ ವಕೀಲ ಮತ್ತು ಹಿರಿಯ ಸಹೋದ್ಯೋಗಿ ರಾಜೀವ್ ಧವನ್ 1 ರೂ. ನೀಡಿದ್ದಾರೆ. ನನ್ನ ಟ್ವೀಟ್ ಗಳು ಸುಪ್ರೀಂ ಕೋರ್ಟನ್ನು ಅಗೌರವಗೊಳಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಇದು ವಾಕ್ ಸ್ವಾತಂತ್ರ್ಯಕ್ಕೆ ಅಭೂತಪೂರ್ವ ಗಳಿಗೆಯಾಗಿದೆ ಮತ್ತು ಅನ್ಯಾಯದ ವಿರುದ್ಧ ಮಾತನಾಡಲು ಹಲವರನ್ನು ಪ್ರೇರೇಪಿಸಿದೆ ಎಂದು ಭಾವಿಸುತ್ತೇನೆ. ನಾನು ಮರು ಪರಿಶೀಲನೆಗೆ ಸಲ್ಲಿಸುವ ಹಕ್ಕನ್ನು ಉಳಿಸಿಕೊಂಡಿದ್ದೇನೆ” ಎಂದು ತಿಳಿಸಿದರು.