40 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಡಿಪಿ 23.9% ರಷ್ಟು ಮಹಾ ಕುಸಿತ!!

01-09-20 09:20 am       Dhruthi Anchan - Correspondent   ದೇಶ - ವಿದೇಶ

40ಕ್ಕೂ ಹೆಚ್ಚು ವರ್ಷಗಳಲ್ಲೇ ಮೊದಲ ಬಾರಿ ದೇಶದ ಜಿಡಿಪಿ ಶೇ.23.9ರಷ್ಟು ಮಹಾಕುಸಿತ ಕಂಡಿದೆ. ಇದು 2020​​​​-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌-ಜೂನ್‌ ತಿಂಗಳ ಅವಧಿಯಲ್ಲಿ ಉಂಟಾದ ಕುಸಿತವಾಗಿದೆ.

ಹೊಸದಿಲ್ಲಿ, ಸೆಪ್ಟೆಂಬರ್.1: ನಿರೀಕ್ಷೆಯಂತೆ ಐತಿಹಾಸಿಕ ಆರ್ಥಿಕ ಕುಸಿತಕ್ಕೆ ಭಾರತ ಸಾಕ್ಷಿಯಾಗಿದ್ದು  ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ  ಶೇ. 23.9ರಷ್ಟು ಭಾರಿ ಕುಸಿತ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ. 3.1ರಷ್ಟು ಬೆಳವಣಿಗೆ ದರ ದಾಖಲಾಗಿತ್ತು.

ಇದು 2020​​​​-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌-ಜೂನ್‌ ತಿಂಗಳ ಅವಧಿಯಲ್ಲಿ ಉಂಟಾದ ಕುಸಿತವಾಗಿದೆ. 2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯ ಗಾತ್ರ 35.25 ಲಕ್ಷ ಕೋಟಿ ರು. ಇತ್ತು.2020-21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಅದು 26.90 ಲಕ್ಷ ಕೋಟಿ ರು.ಗೆ ಕುಸಿತವಾಗಿದೆ. ಹೀಗಾಗಿ ಈ ತ್ರೈಮಾಸಿಕ ಅವಧಿಯಲ್ಲಿ ಶೇ.23.9ರಷ್ಟು ಇಳಿಕೆ ಕಂಡಿದೆ.

ದೇಶದಲ್ಲಿ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.3.4ರಷ್ಟುಬೆಳವಣಿಗೆ  ಕಂಡ ಏಕೈಕ ಕ್ಷೇತ್ರವೆಂದರೆ ಅದು ಕೃಷಿ. ಕಳೆದ ವರ್ಷದ ಈ ಅವಧಿಯಲ್ಲಿ ಕೃಷಿ ಕ್ಷೇತ್ರ ಶೇ.3ರಷ್ಟು ಬೆಳವಣಿಗೆ ಸಾಧಿಸಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದು ಶೇ.0.4ರಷ್ಟು ಹೆಚ್ಚು ಬೆಳವಣಿಗೆ ಕಂಡಿದೆ.

ಸೋಮವಾರ ಭಾರತೀಯ ಸಂಖ್ಯಾ ಶಾಸ್ತ್ರೀಯ ಕಚೇರಿ ಈ ಮಾಹಿತಿ ಬಿಡುಗಡೆ ಮಾಡಿದ್ದು, 1996ರಲ್ಲಿ ತ್ರೈಮಾಸಿಕ ಜಿಡಿಪಿ ವರದಿ ಬಿಡುಗಡೆ ಮಾಡುವ ಸಂಪ್ರದಾಯ ಆರಂಭವಾದ ನಂತರ ಇಲ್ಲಿಯವರೆಗೆ ಈ ಪ್ರಮಾಣದ ಆರ್ಥಿಕ ಕುಸಿತ ದಾಖಲಾಗಿರಲಿಲ್ಲ.