ದೇಶದ ಮೊದಲ ಹೃದಯ ಶಾಸ್ತ್ರಜ್ಞೆ, ಹೃದ್ರೋಗ ಶಾಸ್ತ್ರದ 'ಅಜ್ಜಿ' ಪದ್ಮಾವತಿ ಅಯ್ಯರ್ ಕೋವಿಡ್‌ಗೆ ಬಲಿ ! 

01-09-20 04:54 pm       Headline Karnataka News Network   ದೇಶ - ವಿದೇಶ

"ಹೃದ್ರೋಗಶಾಸ್ತ್ರದ ಅಜ್ಜಿ" ಎಂದೇ ಗುರುತಿಸಲ್ಪಟ್ಟಿದ್ದ ಪದ್ಮಾವತಿ ಅಯ್ಯರ್ ತಮ್ಮ 103ನೇ ವಯಸ್ಸಿನಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. 

ಹೊಸದಿಲ್ಲಿ , ಸೆಪ್ಟೆಂಬರ್ 1: ದೇಶದ ಮೊಟ್ಟಮೊದಲ ಹೃದಯ ರೋಗ ತಜ್ಞೆಯಾಗಿದ್ದ ಪದ್ಮಾವತಿ ಅಯ್ಯರ್ ತಮ್ಮ 103ನೇ ವಯಸ್ಸಿನಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. 

ಮ್ಯಾನ್ಮಾರ್‌ನಲ್ಲಿ ಜನಿಸಿದ ಪದ್ಮಾವತಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಸೇನೆ ದಾಳಿ ನಡೆಸಿದ ಕಾರಣಕ್ಕೆ ಭಾರತಕ್ಕೆ ಬಂದು ನೆಲೆಸಿದ್ದರು. ದೇಶದ ಪ್ರಪ್ರಥಮ ಮಹಿಳಾ ಹೃದ್ರೋಗ ತಜ್ಞೆ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದರು.

ಹನ್ನೊಂದು ದಿನಗಳ ಹಿಂದೆ ಕೋವಿಡ್-19 ಸೋಂಕು ಕಂಡುಬಂದ ಇವರನ್ನು ದೆಹಲಿಯ ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್ (ಎನ್‌ಎಚ್‌ಐ)ಗೆ ದಾಖಲಿಸಲಾಗಿತ್ತು. 1981ರಲ್ಲಿ ಈ ಸಂಸ್ಥೆಯನ್ನು ಸ್ವತಃ ಇವರೇ ಆರಂಭಿಸಿದ್ದರು.

ಕಳೆದ ಐದು ವರ್ಷಗಳಿಂದ ವ್ಹೀಲ್‌ಚೇರ್ ನೆರವಿನಲ್ಲಿ ಆಚೀಚೆ ಹೋಗುತ್ತಿದ್ದರೂ, ಮಾನಸಿಕವಾಗಿ ಸ್ಥಿರತೆ ಕಾಯ್ದುಕೊಂಡಿದ್ದರು. ಹೃದಯ ರೋಗದ ಬಗ್ಗೆ, ತಾವು ಸ್ಥಾಪಿಸಿದ ಹಾರ್ಟ್ ಇನ್ಸ್ಟಿಟ್ಯೂಟ್ ಬಗ್ಗೆ ಸ್ಪಷ್ಟ ಮಾಹಿತಿಗಳು ಅವರಲ್ಲಿದ್ದವು ಎಂದು ಎನ್‌ಎಚ್‌ಐ ಸಿಇಓ ಡಾ.ಓ.ಪಿ. ಯಾದವ್ ಹೇಳಿದ್ದಾರೆ.

"ಹೃದ್ರೋಗಶಾಸ್ತ್ರದ ಅಜ್ಜಿ" ಎಂದೇ ಗುರುತಿಸಲ್ಪಟ್ಟಿದ್ದ ಪದ್ಮಾವತಿ ಅಯ್ಯರ್, ಸೋಂಕಿಗೆ ಹೃದಯ ಕವಾಟ ಹಾನಿಗೀಡಾಗುವ ರುಮೇಟಿಕ್ ಹೃದ್ರೋಗ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಕೈಗೊಂಡಿದ್ದರು. ರಂಗೂಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಪದ್ಮಾವತಿ, ಸ್ಟಾಕ್‌ಹೋಂನ ಸೋದೆರ್‌ಶ್ಚೂಸೆಟ್ ಆಸ್ಪತ್ರೆ, ಅಮೆರಿಕದ ಜಾನ್ ಹಾಕಿನ್ಸ್ ಮತ್ತು ಹಾರ್ವಡ್ ಮೆಡಿಕಲ್ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದರು. ಇವರು ಲಂಡನ್‌ನ ರಾಯಲ್ ಕಾಲೇಜ್ ಆಫ್ ಫಿಸೀಶಿಯನ್ಸ್‌ನ ಫೆಲೋ ಕೂಡ ಆಗಿದ್ದರು. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.