PUBG ಸೇರಿದಂತೆ 117 ಚೀನಿ ಆ್ಯಪ್​ಗಳು ಬ್ಯಾನ್..!

02-09-20 06:02 pm       Headline Karnataka News Network   ದೇಶ - ವಿದೇಶ

ತಂಟೆಕೋರ ಚೀನಾಗೆ ಮತ್ತೆ ಭಾರತ ಶಾಕ್‌ ನೀಡಿದ್ದು 117 ಚೀನಾ ಅಪ್ಲಿಕೇಶನ್‌ ಜೊತೆ ಜನಪ್ರಿಯ ಗೇಮಿಂಗ್‌ ಅಪ್ಲಿಕೇಶನ್‌ ಪಬ್‌ಜೀಯನ್ನು ನಿಷೇಧಿಸಿದೆ.

ನವದೆಹಲಿ, ಸೆಪ್ಟೆಂಬರ್ 02: ಜನಪ್ರಿಯ ಗೇಮ್ ಪಬ್​ಜಿ  ಸೇರಿದಂತೆ 117 ಚೀನೀ ಮೊಬೈಲ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ.  ಭಾರತದ ಸಾರ್ವಭೌಮತ್ವ ಮತ್ತು ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

ಮೂರನೇ ಬಾರಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದಕ್ಷಿಣ ಕೊರಿಯಾ ಕಂಪನಿ ಅಭಿವೃದ್ಧಿ ಪಡಿಸಿದ ಪಬ್‌ಜಿ ನಿಷೇಧಿಸಬೇಕೆಂದು ಕೂಗು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದಿನಿಂದಲೂ ಕೇಳಿ ಬಂದಿತ್ತು.

ಮಕ್ಕಳ ಮೆದುಳಿನ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯುವ ಜನತೆ ಹಾಳಾಗುತ್ತಿದ್ದಾರೆ ಹೀಗಾಗಿ ನಿಷೇಧಿಸಬೇಕೆಂದು ಜನ ಆಗ್ರಹಿಸಿದ್ದರು.

ಒಟ್ಟು 250 ಚೀನಿ ಅಪ್ಲಿಕೇಶನ್‌ಗಳ ಮೇಲೆ ಭಾರತ ನಿಗಾ ಇಟ್ಟಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಮತ್ತು ಪ್ರಜೆಗಳ ಖಾಸಗಿತನವನ್ನು ದುರುಪಯೋಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಅಪ್ಲಿಕೇಶನ್‌ಗಳ ಮೇಲೆ ನಿಗಾ ಇಟ್ಟಿದೆ.

ಜುಲೈನಲ್ಲಿ ಚೀನಾಗೆ ಸೇರಿದ 59 ಅಪ್ಲಿಕೇಶನ್ ಗಳನ್ನು ದೇಶದಲ್ಲಿ ಬಳಕೆ ಮಾಡದಂತೆ ನಿಷೇಧ ವಿಧಿಸಲಾಗಿತ್ತು. ಇದೀಗ ಮತ್ತೆ 118 ಆ್ಯಪ್​ಗಳ ಮೇಲೆ ನಿಷೇಧ ಹೇರುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಈ ಕ್ರಮವು ಕೋಟಿ ದೇಶದ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರ ಹಿತಾಸಕ್ತಿಗಳನ್ನು ಕಾಪಾಡಲಿದ್ದು, ಭಾರತೀಯ ಸೈಬರ್‌ಪೇಸ್‌ನ ಸುರಕ್ಷತೆ, ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.