ಟಾಪ್ ಥಿಂಕರ್ ; ಕೇರಳದ ಆರೋಗ್ಯ ಸಚಿವೆಗೆ ಬ್ರಿಟಿಷ್ ಮ್ಯಾಗಜಿನ್ ಗೌರವ

03-09-20 02:19 pm       Dhruthi Anchan - Correspondent   ದೇಶ - ವಿದೇಶ

ಕೇರಳ ಆರೋಗ್ಯ ಸಚಿವೆ ಶೈಲಜಾ ವಿಶ್ವದ ಅತಿ ಉನ್ನತ ಚಿಂತಕಿ ಎಂದು ಬ್ರಿಟಿಷ್ ನಿಯತ ಕಾಲಿಕ ಪ್ರಾಸ್ಪೆಕ್ಟ್ ಆಯ್ಕೆ ಮಾಡಿದೆ

ತಿರುವನಂತಪುರ, ಸೆಪ್ಟಂಬರ್ 3: ಕೊರೊನಾ ಸೋಂಕು ತಡೆಗಟ್ಟುವಲ್ಲಿ ಗಮನಾರ್ಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಶ್ವ ಸಮುದಾಯದ ಗಮನ ಸೆಳೆದ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರನ್ನು ಬ್ರಿಟಿಷ್ ನಿಯತಕಾಲಿಕವೊಂದು ಟಾಪ್ ಥಿಂಕರ್ ಎಂದು ಕರೆದಿದೆ. 

ಪ್ರಾಸ್ಪೆಕ್ಟ್ ಎನ್ನುವ ಬ್ರಿಟಿಷ್ ಮ್ಯಾಗಜಿನ್, ಕೊರೊನಾ ಸಂದರ್ಭದಲ್ಲಿ ಹೆಸರು ಮಾಡಿದ ವಿಶ್ವದ 50 ಗಣ್ಯರನ್ನು ಲಿಸ್ಟ್ ಮಾಡಿದ್ದು, ಅದರಲ್ಲಿ ಶೈಲಜಾ ಅವರನ್ನೂ ಸೇರಿಸಿದೆ. ಈ ಪಟ್ಟಿಯಲ್ಲಿ ನ್ಯೂಜಿಲಂಡ್ ಪ್ರಧಾನಿ ಜೆಸಿಂಡಾ ಆರ್ಡೆನ್, ತತ್ವಶಾಸ್ತ್ರಜ್ಞೆ ಕಾರ್ನೆಲ್ ವೆಸ್ಟ್, ಇತಿಹಾಸಕಾರ ಓಲಿವೆಟ್ ಅಟೆಲ್ ಕೂಡ ಸೇರಿದ್ದಾರೆ. 

ಶೈಲಜಾ ಅವರನ್ನು ‘ರೈಟ್ ವುಮೆನ್ ಇನ್ ರೈಟ್ ಪ್ಲೇಸ್ ‘ ಎಂದು ಬಣ್ಣಿಸಿರುವ ನಿಯತಕಾಲಿಕ, ಕೋವಿಡ್ 19 ಚೀನಾದಲ್ಲಿ ಇರುವಾಗಲೇ ಅದರ ಪೂರ್ವಾಪರಗಳನ್ನು ತಿಳಿದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು ಎಂದು ಹೇಳಿದೆ. ಇತರೇ ಅಂತಾರಾಷ್ಟ್ರೀಯ ಮಾಧ್ಯಮಗಳಾದ ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ಪತ್ರಿಕೆಗಳು ಕೂಡ ಕೇರಳದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸಿದ ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದವು.