ತೆಲಂಗಾಣ ಬಿಜೆಪಿ ಶಾಸಕನಿಗೆ ಫೇಸ್ಬುಕ್, ಇನ್ ಸ್ಟಾ ಗ್ರಾಮ್ ನಿಷೇಧದ ಬರೆ ! 

03-09-20 04:56 pm       Headline Karnataka News Network   ದೇಶ - ವಿದೇಶ

ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ತಮ್ಮ ಫೇಸ್ಬುಕ್​ನಲ್ಲಿ ದ್ವೇಷಪೂರಿತ ಪೋಸ್ಟ್ ಹಾಕಿದ್ದಾರೆಂದು ವಿಪಕ್ಷಗಳು ಆರೋಪ ಮಾಡಿದ ಬೆನ್ನಲ್ಲೇ ಶಾಸಕರ ಫೇಸ್​ಬುಕ್ ಅಕೌಂಟ್ ಅನ್ನು ತೆಗೆದುಹಾಕಲಾಗಿದೆ.

ಹೈದರಾಬಾದ್, ಸೆಪ್ಟೆಂಬರ್ 3: ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ದಕ್ಕಾಗಿ ತೆಲಂಗಾಣದ ಬಿಜೆಪಿ ಶಾಸಕನೊಬ್ಬನ ಫೇಸ್ಬುಕ್ ಖಾತೆಯನ್ನು ಫೇಸ್ಬುಕ್ ಕಂಪೆನಿಯೇ ಬ್ಯಾನ್ ಮಾಡಿದೆ. ತೆಲ‌ಂಗಾಣ ರಾಜ್ಯದ ಏಕೈಕ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ವಿರುದ್ಧ ಫೇಸ್ಬುಕ್ ನಿಂದಲೇ ಬ್ಯಾನ್ ಮಾಡೋದಾಗಿ ಹೇಳಿದೆ. ಇದೇ ವೇಳೆ, ಇನ್ ಸ್ಟಾ ಗ್ರಾಮ್ ಕೂಡ ರಾಜಾ ಸಿಂಗ್ ಮೇಲೆ ನಿಷೇಧ ಹಾಕಿದೆ. 

ರಾಜಾ ಸಿಂಗ್ ಅವರನ್ನು ನಾವು ಫೇಸ್ಬುಕ್ ಬಳಕೆಯಿಂದ ಹೊರಗಿಡುತ್ತಿದ್ದೇವೆ. ಅವರು ನಮ್ಮ ಫೇಸ್ಬುಕ್ ನಿಯಮವನ್ನು ಉಲ್ಲಂಘಿಸಿ, ಹಿಂಸೆ, ಪ್ರಚೋದನೆಗೆ ಕಾರಣವಾಗುವ ಅಂಶಗಳನ್ನು ಪೋಸ್ಟ್ ಮಾಡುತ್ತಿದ್ದರು. ಅದಕ್ಕೆ ಫೇಸ್ಬುಕ್ ವೇದಿಕೆ ಆಗಬಾರದೆಂಬ ನೆಲೆಯಲ್ಲಿ ಅವರನ್ನು ಫೇಸ್ಬುಕ್ಕಿಂದ ನಿಷೇಧ ವಿಧಿಸುತ್ತಿದ್ದೇವೆ ಎಂದು ಫೇಸ್ಬುಕ್ ಹೇಳಿಕೆಯಲ್ಲಿ ತಿಳಿಸಿದೆ. 

ಇದೇ ವೇಳೆ, ರಾಜಾ ಸಿಂಗ್ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದು ನಾನು 2019ರಿಂದಲೇ ಫೇಸ್ಬುಕ್ ಬಳಕೆ ಮಾಡುತ್ತಿಲ್ಲ. 2018ರಲ್ಲಿ ನನ್ನ ಖಾತೆ ಹ್ಯಾಕ್ ಆಗಿತ್ತು. ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದೆ. ಈಗ ಮತ್ತೆ ಹೊಸ ಖಾತೆ ತೆರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. 

ಮೊನ್ನೆ ಸೆಪ್ಟೆಂಬರ್ 1ರಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಗೆ ಭಾರತದಲ್ಲಿ ಫೇಸ್ಬುಕ್ ರಾಜಕೀಯಕ್ಕೆ ಬಳಕೆಯಾಗುತ್ತಿರುವ ಬಗ್ಗೆ ಪತ್ರ ಬರೆದಿದ್ದರು. ಪತ್ರ ಬರೆದ ಎರಡೇ ದಿನದಲ್ಲಿ ಫೇಸ್ಬುಕ್ ಬಿಜೆಪಿ ಶಾಸಕನನ್ನೇ ಫೇಸ್ಬುಕ್ಕಿಂದ ಬ್ಯಾನ್ ಮಾಡಿದ್ದು ಕಾಕತಾಳೀಯ.