ದುಬಾರಿ ಆಯ್ತು ಪಬ್ ಜಿ ಬ್ಯಾನ್ ; ಒಂದೇ ದಿನದಲ್ಲಿ 14 ಬಿಲಿಯನ್ ಡಾಲರ್ ನಷ್ಟ !!

04-09-20 10:16 am       Headline Karnataka News Network   ದೇಶ - ವಿದೇಶ

ಸರ್ಕಾರವು ಪಬ್ ಜಿಯನ್ನು ನಿಷೇಧಿಸಿದ ಬೆನ್ನಲ್ಲೇ, ಟೆನ್ಸೆಂಟ್ ಮಾರುಕಟ್ಟೆ ಮೌಲ್ಯದಲ್ಲಿ ಬರೋಬ್ಬರಿ 14 ಬಿಲಿಯನ್ ಡಾಲರ್ ನಷ್ಟವಾಗಿದೆ.

ನವದೆಹಲಿ, ಸೆಪ್ಟಂಬರ್.3: ಚೀನಾ ಮೂಲದ ಪಬ್ ಜಿ ವಿಡಿಯೋ ಗೇಮ್ ಏಪ್ ಭಾರತದಲ್ಲಿ ನಿಷೇಧ ಆಗಿದ್ದು ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಪಬ್ ಜಿ ವಿಡಿಯೋ ಗೇಮ್ ಆವಿಷ್ಕರಿಸಿದ್ದ ಸೌತ್ ಕೊರಿಯಾ, ಆಬಳಿಕ ಅದನ್ನು ಟೆನ್ಸೆಂಟ್ ಕಂಪನಿಗೆ ಮಾರಿತ್ತು. ಈಗ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದ ಭಾರತದಲ್ಲಿ ಪಬ್ ಜಿ ನಿಷೇಧ ಆಗಿದ್ದರಿಂದ ಕಂಪನಿಯ ಷೇರು ಮೌಲ್ಯ ಒಂದೇ ದಿನ ಇಳಿಕೆಯಾಗಿದ್ದು, ಇದರಿಂದ ಕಂಪನಿಗೆ ಒಂದೇ ದಿನದಲ್ಲಿ 14 ಬಿಲಿಯನ್ ಡಾಲರ್ ನಷ್ಟ ಆಗಿದ್ದಾಗಿ ಹೇಳಲಾಗುತ್ತಿದೆ.

ಪಬ್ ಜಿ ಏಪ್ ಗಳಿಗೆ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರಿದ್ದರು. ಅಂದಾಜು ಪ್ರಕಾರ, 20 ಕೋಟಿಗೂ ಹೆಚ್ಚು ಗ್ರಾಹಕರನ್ನು ಭಾರತ ಒಂದರಲ್ಲೇ ಪಬ್ ಜಿ ಹೊಂದಿತ್ತು ಎನ್ನಲಾಗುತ್ತಿದೆ. ಹೀಗಾಗಿ ಪಬ್ ಜಿ ಬ್ಯಾನ್ ಈಗಲೇ ಅನುಷ್ಠಾನಕ್ಕೆ ಬಂದಿರದಿದ್ದರೂ, ಭಾರತ ಸರಕಾರ ನಿಷೇಧ ವಿಧಿಸಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಇದರಿಂದಾಗಿ ಟೆನ್ಸೆಂಟ್ ಕಂಪನಿಯ ಷೇರುಗಳನ್ನು ಗ್ರಾಹಕರು ಮಾರತೊಡಗಿದ್ದಾರೆ. ಇದರಿಂದಾಗಿ ಕಂಪೆನಿಯ ಷೇರು ಮೌಲ್ಯ ಎರಡು ಶೇ. ಇಳಿಕೆಯಾಗಿದ್ದಲ್ಲದೆ, ಇದರಿಂದ ಕಂಪನಿಗೆ ಭಾರೀ ನಷ್ಟ ಆಗಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಜೊತೆಗಿನ ಗಡಿ ಸಂಘರ್ಷದ ಬಳಿಕ ಭಾರತದಲ್ಲಿ ಮೊದಲಿಗೆ ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ 59 ಜನಪ್ರಿಯ ಏಪ್ ಗಳನ್ನು ನಿಷೇಧಿಸಲಾಗಿತ್ತು. ಎರಡನೇ ಲಿಸ್ಟ್ ನಲ್ಲಿ ಮತ್ತೆ 63 ಏಪ್ ನಿಷೇಧ ಆದಾಗಲೂ ಪಬ್ ಜಿ ನಿಷೇಧಿತ ಪಟ್ಟಿಯಲ್ಲಿ ಇಲ್ಲದೇ ಇದ್ದುದು ಕಂಪೆನಿಗೆ ಇನ್ನೇನು ಸಮಸ್ಯೆ ಇರಲ್ಲ ಎಂದುಕೊಂಡಿತ್ತು. ಈಗ ಮೂರನೇ ಪಟ್ಟಿಯಲ್ಲಿ 118 ಏಪ್ ಲಿಸ್ಟ್ ಮಾಡಿದ್ದು, ಅದರಲ್ಲಿ ಪಬ್ ಜಿಯನ್ನು ಸೇರಿಸಿದ್ದು ಚೀನಾಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಚೀನಾ ವಿರುದ್ಧ ಭಾರತ ನಡೆಸುತ್ತಿರುವ ಡಿಜಿಟಲ್ ಸ್ಟ್ರೈಕ್ ನಿಂದಾಗಿ ಅಲ್ಲಿನ ಬಹುತೇಕ ಇಲೆಕ್ಟ್ರಾನಿಕ್ ಮತ್ತು ಸಾಫ್ಟ್ ವೇರ್ ಕಂಪನಿಗಳು ತತ್ತರಿಸಿ ಹೋಗಿವೆ. ಇದರಿಂದಾಗಿ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿರುದ್ಧ ಕಂಪನಿಗಳು ಬಹಿರಂಗವಾಗೇ ಕಿಡಿಕಾರ ತೊಡಗಿವೆ