ಆಂಧ್ರ ಪ್ರದೇಶದಲ್ಲಿ ಆನ್ ಲೈನ್ ರಮ್ಮಿ, ಪೋಕರ್ ನಿಷೇಧ!!

04-09-20 05:00 pm       Dhruthi Anchan - Correspondant   ದೇಶ - ವಿದೇಶ

ಆಂಧ್ರಪ್ರದೇಶ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಆನ್​ಲೈನ್​ ರಮ್ಮಿ, ಪೋಕರ್​ ಆಟಗಳನ್ನೂ ನಿಷೇಧಿಸಲು ನಿರ್ಧಾರ ಮಾಡಿದೆ.

ಹೈದರಾಬಾದ್, ಸೆಪ್ಟೆಂಬರ್ 04: ಕೇಂದ್ರ ಸರ್ಕಾರ ನಿನ್ನೆಯಷ್ಟೇ ಪಬ್​​ಜಿ ಸೇರಿ ಚೀನಾದ 118 ಆಯಪ್​​ಗಳನ್ನು ನಿಷೇಧಿಸಿದೆ. ದೇಶದ ಸಾರ್ವಭೌಮತ್ವ, ಸುರಕ್ಷತೆ, ಸಮಗ್ರತೆ ದೃಷ್ಟಿಯಿಂದ ಬ್ಯಾನ್​ ಮಾಡಿದ್ದಾಗಿ ಹೇಳಿದ್ದು, ಇದರ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಆನ್​ಲೈನ್​ ರಮ್ಮಿ, ಪೋಕರ್​ ಆಟಗಳನ್ನೂ ನಿಷೇಧಿಸಲು ನಿರ್ಧಾರ ಮಾಡಿದೆ. ಯುವಜನತೆಯ ಹಿತದೃಷ್ಟಿಯಿಂದ ಆನ್​​ಲೈನ್​ ರಮ್ಮಿ, ಪೋಕರ್ ಆಟಗಳನ್ನೂ ಬ್ಯಾನ್​ ಮಾಡುತ್ತಿರುವುದಾಗಿ ಹೇಳಿದೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಆನ್ ಲೈನ್ ಜೂಜಾಟವು ಯುವಕರ ದಾರಿ ತಪ್ಪಿಸುತ್ತಿದೆ. ಹೀಗಾಗಿ ಎಲ್ಲಾ ತೆರನಾದ ಆನ್ ಲೈನ್ ಜೂಜಾಟವನ್ನು ಆಂಧ್ರದಲ್ಲಿ ನಿಷೇಧಿಸಲಾಗುವುದು ಎಂದು ಸಚಿವ ವೆಂಕಟರಾಮಯ್ಯ ತಿಳಿಸಿದ್ದಾರೆ.

ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯದ ಪ್ರಕಾರ, ಮೊದಲ ಬಾರಿಯ ಅಪರಾಧಕ್ಕಾಗಿ ಆನ್‌ಲೈನ್ ಗ್ಯಾಂಬ್ಲಿಂಗ್ ಸಂಘಟಕರನ್ನು ದಂಡ ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು. ಎರಡನೆಯ ಬಾರಿ ತಪ್ಪು ಮರುಕಳಿಸಿದರೆ ದಂಡ ಹಾಗೂ ಎರಡು ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ಇದಲ್ಲದೆ ಆನ್‌ಲೈನ್‌ನಲ್ಲಿನ ಜೂಜಿನ ಆಟಗಳನ್ನು ಆಡುವ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಅಂತಹವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಹ ಸಚಿವ ನಾನಿ ತಿಳಿಸಿದ್ದಾರೆ.

Join our WhatsApp group for latest news updates