ಮೋದಿ ಕರೆಗೆ ಓಗೊಟ್ಟ 'ಆ್ಯಕ್ಷನ್ ಕಿಂಗ್' ; ಪಬ್ ಜಿ ಜಾಗಕ್ಕೆ ಅಕ್ಷಯ್ ಗೇಮ್ !! 

04-09-20 09:17 pm       Headline Karnataka News Network   ದೇಶ - ವಿದೇಶ

ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸದ್ಯದಲ್ಲೇ ಆ್ಯಕ್ಷನ್ ಮಲ್ಟಿಪ್ಲೇಯರ್ ಗೇಮ್ ಒಂದನ್ನು ಬಿಡುಗಡೆ ಮಾಡಲಿದ್ದು ಇದರಲ್ಲಿ ಗೇಮ್ ಆಡುವ ಮಂದಿಗೆ ಆ್ಯಕ್ಷನ್ ಅನುಭವದ ಜೊತೆಗೆ ಸೈನಿಕರ ತ್ಯಾಗದ ಜೀವನದ ಕುರಿತು ಹೇಳುವುದಾಗಿ ಪ್ರಕಟಿಸಿದ್ದಾರೆ.

ಮುಂಬೈ, ಸೆಪ್ಟೆಂಬರ್ 4: ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಚಳವಳಿಯನ್ನು ಬೆಂಬಲಿಸಿ ಹೊಸ ಕೊಡುಗೆ ನೀಡಲು ಮುಂದೆ ಬಂದಿದ್ದಾರೆ. 

ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸದ್ಯದಲ್ಲೇ ಆ್ಯಕ್ಷನ್ ಮಲ್ಟಿಪ್ಲೇಯರ್ ಗೇಮ್ ಒಂದನ್ನು ಬಿಡುಗಡೆ ಮಾಡಲಿದ್ದು ಇದರಲ್ಲಿ ಗೇಮ್ ಆಡುವ ಮಂದಿಗೆ ಆ್ಯಕ್ಷನ್ ಅನುಭವದ ಜೊತೆಗೆ ಸೈನಿಕರ ತ್ಯಾಗದ ಜೀವನದ ಕುರಿತು ಹೇಳುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, ಈ ವಿಡಿಯೋ ಗೇಮ್ ನಿಂದ ಬರುವ ಆದಾಯದ 20 ಶೇಕಡಾ ಮೊತ್ತವನ್ನು ಸೈನಿಕರ "ಭಾರತ್ ಕೆ ವೀರ್" ಟ್ರಸ್ಟ್ ಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ತಮ್ಮ ಇನ್ ಸ್ಟಾ ಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಮೋದಿಯವರ ಆತ್ಮನಿರ್ಭರ್ ಚಳವಳಿಯನ್ನು ಬೆಂಬಲಿಸಿ, ಹೊಸ ಆ್ಯಕ್ಷನ್ ಗೇಮ್ ತರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ. 

ಭಾರತದಲ್ಲಿ ಚೀನಾ ಮೂಲದ ಜನಪ್ರಿಯ ವಿಡಿಯೋ ಗೇಮ್ ಏಪ್ ಪಬ್ ಜಿ ಬ್ಯಾನ್ ಆದ ಸಂದರ್ಭದಲ್ಲಿಯೇ ಅಕ್ಷಯ್ ಕುಮಾರ್ FAU-G ಮಾದರಿಯ ಗೇಮ್ ಪ್ರಕಟಿಸಿದ್ದು ಭವಿಷ್ಯದಲ್ಲಿ ಪಬ್ ಜಿ ಜಾಗ ತುಂಬಲಿದೆಯೇ ಎನ್ನುವ ಮಾತು ಕೇಳಿಬಂದಿದೆ. ಪಬ್ ಜಿ ನಿಷೇಧ ಆಗಿರುವುದು ಭಾರತದಲ್ಲಿ ಬಹುತೇಕ ವಿದ್ಯಾರ್ಥಿಗಳು ಮತ್ತು ಯುವ ಜನರಿಗೆ ಬೇಸರ ತರಿಸಿತ್ತು. ಈಗ ಅಕ್ಷಯ್ ತಮ್ಮ ಹೊಸ ಮಾದರಿಯ ಗೇಮ್ ಪ್ಲಾನ್ ಪ್ರಕಟ ಮಾಡಿರುವುದು ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ಗೇಮ್ ಮೊಬೈಲ್ ಆ್ಯಪ್ ನಲ್ಲಿ ಸಿಗುವುದೇ ಅಥವಾ ಇನ್ಯಾವುದೇ ಪ್ಲಾಟ್ ಫಾರಂನಲ್ಲಿ ಸಿಗಲಿದೆಯೇ ಎಂದು ಅಕ್ಷಯ್ ಕುಮಾರ್ ಗೆ ನೆಟ್ಟಿಗರು ಕುತೂಹಲದ ಪ್ರಶ್ನೆ ಮುಂದಿಡುತ್ತಿದ್ದಾರೆ‌.

Join our WhatsApp group for latest news updates