ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 40 ಲಕ್ಷಕ್ಕೆ ಏರಿಕೆಯಾದರೆ, ಚೇತರಿಸಿಕೊಂಡವರ ಸಂಖ್ಯೆ 31 ಲಕ್ಷ!!!

05-09-20 10:57 am       Headline Karnataka News Network   ದೇಶ - ವಿದೇಶ

ಅಮೆರಿಕ ಹಾಗೂ ಬ್ರೆಝಿಲ್ ದೇಶಗಳನ್ನು ಹೊರತುಪಡಿಸಿದರೆ 40 ಲಕ್ಷ ಪ್ರಕರಣಗಳು ವರದಿಯಾದ ಮೂರನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ.

ಹೊಸದಿಲ್ಲಿ, ಸೆಪ್ಟೆಂಬರ್.5: ಭಾರತದಲ್ಲಿ 30 ಲಕ್ಷ ಕೊರೋನ ವೈರಸ್ ಸೋಂಕು ಪ್ರಕರಣಗಳು ದಾಖಲಾದ ಕೇವಲ 13 ದಿನಗಳಲ್ಲಿ ಮತ್ತೆ 10 ಲಕ್ಷ ಪ್ರಕರಣಗಳು ಸೇರ್ಪಡೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 40 ಲಕ್ಷದ ಗಡಿ ದಾಟಿದೆ.

ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶುಕ್ರವಾರ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು, ಇದುವರೆಗಿನ ಗರಿಷ್ಠ ಅಂದರೆ 87,800 ಪ್ರಕರಣಗಳು ಶುಕ್ರವಾರ ಸೇರ್ಪಡೆಯಾಗಿವೆ. ಸತತ ಮೂರನೇ ದಿನ ದೇಶದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ.

ಅಮೆರಿಕ ಹಾಗೂ ಬ್ರೆಝಿಲ್ ದೇಶಗಳನ್ನು ಹೊರತುಪಡಿಸಿದರೆ 40 ಲಕ್ಷ ಪ್ರಕರಣಗಳು ವರದಿಯಾದ ಮೂರನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ. ಭಾರತದಲ್ಲಿ ಮೊದಲ 10 ಲಕ್ಷ ಪ್ರಕರಣಗಳು ದಾಖಲಾಗಲು ಸುಧೀರ್ಘ ಅವಧಿ (168 ದಿನ) ತೆಗೆದುಕೊಂಡಿದ್ದು, ಬಳಿಕ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.

ದೇಶದಲ್ಲಿ 10 ಲಕ್ಷ ಇದ್ದ ಪ್ರಕರಣಗಳು ಕೇವಲ 50 ದಿನಗಳಲ್ಲಿ 40 ಲಕ್ಷಕ್ಕೆ ಬೆಳೆದಿವೆ. ಬ್ರೆಝಿಲ್‌ನಲ್ಲಿ ಈ ಪ್ರಮಾಣದ ಬೆಳವಣಿಗೆಗೆ 75 ದಿನ ತೆಗೆದುಕೊಂಡಿದ್ದರೆ, ಅಮೆರಿಕದಲ್ಲಿ 86 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 10 ಲಕ್ಷದಿಂದ 40 ಲಕ್ಷಕ್ಕೇರಿತ್ತು. ಕೊನೆಯ 10 ಲಕ್ಷ ಪ್ರಕರಣಗಳು ಅತ್ಯಂತ ಕ್ಷಿಪ್ರ ಅವಧಿಯಲ್ಲಿ ವರದಿಯಾಗಿದ್ದು, ಕೇವಲ 13 ದಿನಗಳಲ್ಲಿ 10 ಲಕ್ಷ ಪ್ರಕರಣ ದಾಖಲಾಗಿದೆ. ಇದುವರೆಗಿನ ದಾಖಲೆ ಅಮೆರಿಕ ಹಾಗೂ ಭಾರತದ ಜಂಟಿ ಹೆಸರಿನಲ್ಲಿದ್ದು, 16 ದಿನಗಳಲ್ಲಿ 10 ಲಕ್ಷ ಪ್ರಕರಣಗಳು ದಾಖಲಾಗಿದ್ದವು.

ಆದಾಗ್ಯೂ ಸೋಂಕಿತರ ಪೈಕಿ ಮೃತಪಟ್ಟವರ ದರ ಈ ಮೂರು ದೇಶಗಳ ಪೈಕಿ ಭಾರತದಲ್ಲೇ ಕನಿಷ್ಠ. 40 ಲಕ್ಷ ಒಟ್ಟು ಸೋಂಕಿತರ ಪೈಕಿ ಭಾರತದಲ್ಲಿ ಮೃತಪಟ್ಟವರು 69,552. ಇದೇ ಹಂತದಲ್ಲಿ ಅಮೆರಿಕದಲ್ಲಿ 1.4 ಲಕ್ಷ ಮಂದಿ ಹಾಗೂ ಬ್ರೆಝಿಲ್‌ನಲ್ಲಿ 1.2 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದರು.

ಶುಕ್ರವಾರ ದೇಶದಲ್ಲಿ 87,852 ಹೊಸ ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 19,218 ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ. 1062 ಮಂದಿ ಶುಕ್ರವಾರ ಸೋಂಕಿನಿಂದ ಮೃತಪಟ್ಟಿದ್ದಾರೆ. ಸತತ ನಾಲ್ಕನೇ ದಿನ ದೇಶದಲ್ಲಿ ಸಾವಿರಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 17 ಸಾವಿರದಷ್ಟು ಹೆಚ್ಚಿ 8.5 ಲಕ್ಷದ ಸನಿಹಕ್ಕೆ ಬಂದಿದೆ.

ಇನ್ನು ಸಮಾಧಾನಕರ ವಿಷಯವೇನೆಂದರೆ ಇಲ್ಲಿಯವರೆಗೂ ದೇಶದಲ್ಲಿ ಸುಮಾರು 31 ಲಕ್ಷ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣವು  ಶೇಕಡಾ 77.2 ಕ್ಕೆ ಏರಿಕೆಯಾಗಿದೆ.