ಅಯೋಧ್ಯೆಯಲ್ಲೇ ತಲೆಯೆತ್ತಲಿದೆ ಬಾಬರಿ ಮಸೀದಿ !! ವಿಭಿನ್ನ ರೀತಿಯ ಅಭಿವೃದ್ಧಿಗೆ ಪ್ಲಾನ್ !! 

05-09-20 10:43 pm       Headline Karnataka News Network   ದೇಶ - ವಿದೇಶ

ಇತ್ತ ರಾಮ ಮಂದಿರ ನಿರ್ಮಾಣ ಆಗೋ ವೇಳೆಯಲ್ಲೇ ಅತ್ತ ಬಾಬರಿ ಮಸೀದಿಯೂ ನಿರ್ಮಾಣ ಆಗಲಿದ್ಯಂತೆ ! ಐದು ಎಕರೆ ವ್ಯಾಪ್ತಿಯಲ್ಲಿ ಮಸೀದಿ ಜೊತೆಗೆ ಆಸ್ಪತ್ರೆ, ಲೈಬ್ರರಿ, ಮ್ಯೂಸಿಯಂ ಮತ್ತಿತರ ಸೌಲಭ್ಯಗಳೂ ತಲೆಯೆತ್ತಲಿದ್ದು ಹೊಸ ಪ್ರವಾಸಿ ತಾಣವಾಗಿ ರೆಡಿ ಮಾಡಲು ಸಿದ್ಧತೆ ನಡೆದಿದೆ.

ನವದೆಹಲಿ, ಸೆ. 05: ಅಯೋಧ್ಯೆಯ ವಿವಾದಿತ ಸ್ಥಳ ಹೇಗೂ ರಾಮಜನ್ಮಭೂಮಿ ಎಂಬ ನೆಲೆಯಲ್ಲಿ ರಾಮನ ಮಂದಿರ ಸ್ಥಾಪನೆಗೆ ನೀಡಲಾಗಿದೆ. ಇದೇ ವೇಳೆ, ದೇಶದ ಮುಸ್ಲಿಮರ ಭಾವನೆಗೆ ನೋವು ಆಗಬಾರದೆಂಬ ನೆಲೆಯಲ್ಲಿ ಐದು ಎಕರೆ ಭೂಮಿ ನೀಡಲಾಗಿತ್ತು. ಈಗ ಲಭ್ಯ ಮಾಹಿತಿ ಪ್ರಕಾರ, ಇತ್ತ ರಾಮ ಮಂದಿರ ನಿರ್ಮಾಣ ಆಗೋ ವೇಳೆಯಲ್ಲೇ ಅತ್ತ ಬಾಬರಿ ಮಸೀದಿಯೂ ನಿರ್ಮಾಣ ಆಗಲಿದ್ಯಂತೆ ! 

ಹೌದು.. ಅಯೋಧ್ಯೆಯ ಧನ್ನೀಪುರ್ ಗ್ರಾಮದಲ್ಲಿ ಹಿಂದೆ ಇದ್ದ ಬಾಬ್ರಿ ಮಸೀದಿಯ ರೀತಿಯಲ್ಲೇ ಹೊಸತೊಂದು ಮಸೀದಿ ನಿರ್ಮಾಣವಾಗಲಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಉತ್ತರ ಪ್ರದೇಶ ಸರಕಾರ ನೀಡಿರುವ ಐದು ಎಕರೆ ಭೂಮಿಯಲ್ಲಿ ಬಾಬರಿ ಮಸೀದಿ ನಿರ್ಮಾಣದ ಜೊತೆಗೆ ಆ ಜಾಗವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಿದ್ದಾರಂತೆ. ಐದು ಎಕರೆ ವ್ಯಾಪ್ತಿಯಲ್ಲಿ ಮಸೀದಿ ಜೊತೆಗೆ ಆಸ್ಪತ್ರೆ, ಲೈಬ್ರರಿ, ಮ್ಯೂಸಿಯಂ ಮತ್ತಿತರ ಸೌಲಭ್ಯಗಳೂ ತಲೆಯೆತ್ತಲಿದ್ದು ಹೊಸ ಪ್ರವಾಸಿ ತಾಣವಾಗಿ ರೆಡಿ ಮಾಡಲು ಸಿದ್ಧತೆ ನಡೆದಿದೆ. ಬಾಬರಿ ಮಸೀದಿ ನಿರ್ಮಾಣಕ್ಕಾಗಿ ರಚಿಸಲಾಗಿರುವ ಟ್ರಸ್ಟ್​ ಪದಾಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ವಿಶೇಷ ಅಂದ್ರೆ, ಮಸೀದಿ ಕಾಂಪ್ಲೆಕ್ಸ್​ನಲ್ಲಿ ನಿರ್ಮಾಣ ಆಗಲಿರುವ ಮ್ಯೂಸಿಯಂನ ಪ್ರಮುಖ ಕ್ಯೂರೇಟರ್ ಆಗಿ ಖ್ಯಾತ ಆಹಾರ ವಿಮರ್ಶಕ ಪುಷ್ಪೇಶ್ ಪಂತ್ ಅವರನ್ನು ನೇಮಕ ಮಾಡಲಾಗಿದೆ.

ಧನ್ನೀಪುರ್​ನ ಮಸೀದಿ ಸಮುಚ್ಚಯದಲ್ಲಿ ಆಸ್ಪತ್ರೆ, ಮ್ಯೂಸಿಯಂನಂಥ ಸೌಲಭ್ಯಗಳಿರುತ್ತವೆ. ಐದು ಎಕರೆ ಪ್ರದೇಶದಲ್ಲಿ 15 ಸಾವಿರ ಚದರಡಿಯಲ್ಲಿ ಮಸೀದಿ ನಿರ್ಮಾಣ ಆಗಲಿದ್ದರೆ, ಇನ್ನುಳಿದ ಜಾಗದಲ್ಲಿ ಇತರೇ ಸೌಕರ್ಯಗಳನ್ನ ರಚಿಸಲಾಗುತ್ತದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ ಅಥರ್ ಹುಸೇನ್ ಹೇಳಿದ್ದಾರೆ.

14ನೇ ಶತಮಾನದಲ್ಲಿ ಮೊಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ಕೆಡವಿ, ಬಾಬರಿ ಮಸೀದಿ ಕಟ್ಟಿದ್ದ ಎನ್ನುವ ನೆಲೆಯಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸುದೀರ್ಘ ವಾದ-ವಿವಾದ ನಡೆದು ರಾಮನ ಪರವಾಗಿ ತೀರ್ಪು ಬಂದಿತ್ತು. ಮಸೀದಿ ಇದ್ದ ಜಾಗದಲ್ಲಿ ಉತ್ಖನನ ವೇಳೆ ದೊರೆತ ಅವಶೇಷಗಳು ಮತ್ತು ಅಯೋಧ್ಯೆಯ ಹಿನ್ನೆಲೆ ಕುರಿತ ವಾದ, ಹಿಂದುಗಳ ಭಾವನೆಗಳ ವಿಚಾರಕ್ಕೆ ಮನ್ನಣೆ ನೀಡಿದ್ದ ಸುಪ್ರೀಂ ಕೋರ್ಟ್, ವಿವಾದಿತ ಜಾಗ ರಾಮನಿಗೇ ಸೇರಿದ್ದು ಎಂದು ತೀರ್ಪು ನೀಡಿತ್ತು. ಮುಸ್ಲಿಮರಿಗೆ ಬಾಬರಿ ಮಸೀದಿಯನ್ನು ಎಲ್ಲಿ ಬೇಕಾದರೂ ಕಟ್ಟಿಕೊಳ್ಳಬಹುದು. ಅಲ್ಲದೆ, ಮುಸ್ಲಿಮರಲ್ಲಿ ಮೂರ್ತಿ ಪೂಜೆ ಅಥವಾ ನಿಶ್ಚಿತ ರೂಪದ ಪರವಾಗಿ ಪೂಜೆ ಮಾಡುವ ಪದ್ಧತಿ ಇಲ್ಲ ಎಂಬ ನೆಲೆಯಲ್ಲಿ ಅವರಿಗೆ ಪ್ರತ್ಯೇಕವಾಗಿ ಐದು ಎಕರೆ ಭೂಮಿ ನೀಡಲು ಆದೇಶದಲ್ಲಿ ತಿಳಿಸಲಾಗಿತ್ತು. ಅದರಂತೆ ಉತ್ತರ ಪ್ರದೇಶ ಸರ್ಕಾರ ಧಮ್ಮಿಪುರ್​ನಲ್ಲಿ ನೀಡಿರುವ 5 ಎಕರೆ ಪ್ರದೇಶವನ್ನು ಈಗ ಅದಕ್ಕಾಗಿ ರಚಿಸಲ್ಪಟ್ಟಿರುವ ಮುಸ್ಲಿಂ ಟ್ರಸ್ಟ್ ಬಾಬರಿ ಮಸೀದಿಯ ಜೊತೆಗೆ ಅತ್ಯಪೂರ್ವವಾಗಿ ಅಭಿವೃದ್ಧಿ ಪಡಿಸಲು ಪ್ಲಾನ್ ಹಾಕಿದೆ.