ವಂದೇ ಭಾರತ್ ಮಿಷನ್ ಮೂಲಕ ತಾಯ್ನಾಡಿಗೆ ಬಂದ 15 ಲಕ್ಷ ಭಾರತೀಯರು!!

06-09-20 03:51 pm       Dhruthi Anchan - Correspondent   ದೇಶ - ವಿದೇಶ

ವಂದೇ ಭಾರತ್ ಮಿಷನ್ ಅಡಿಯಲ್ಲಿ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ಭಾರತಕ್ಕೆ ಮರಳಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್​​ದೀಪ್ ಸಿಂಗ್ ಪುರಿ ಶನಿವಾರ ತಿಳಿಸಿದ್ದಾರೆ.

ನವದೆಹಲಿ, ಸೆಪ್ಟೆಂಬರ್. 6: ಕೊರೊನಾ ವೈರಸ್ ಪಿಡುಗಿನಿಂದ ವಿವಿಧ ದೇಶಗಳಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ 15ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ವಂದೇ ಭಾರತ್ ಮಿಷನ್ ಯೋಜನೆಯಡಿ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಹರ್​​ದೀಪ್ ಸಿಂಗ್ ಪುರಿ, ಮೇ 6ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಬೇರೆ ದೇಶಗಳಲ್ಲಿ ಸಿಕ್ಕಿಬಿದ್ದಿರೋ ಭಾರತೀಯರನ್ನು ಕರೆತರುವ ಮತ್ತು ಬೇರೆ ದೇಶದವರನ್ನು ಕಳುಹಿಸುವ ಪ್ರಕ್ರಿಯೆಗೆ ಅಂತಾರಾಷ್ಟ್ರೀಯ ವಿಮಾನಗಳು ಅನುಕೂಲ ಮಾಡಿಕೊಡುತ್ತಿವೆ. ಈವರೆಗೆ 15 ಲಕ್ಷ ಭಾರತೀಯರು ಭಾರತಕ್ಕೆ ಬಂದಿದ್ದು, ಅವರಲ್ಲಿ 4.5 ಲಕ್ಷ ಮಂದಿ ವಿಮಾನದಲ್ಲೇ ಭಾರತಕ್ಕೆ ಮರಳಿದ್ದಾರೆ ಅಂತ ಮಾಹಿತಿ ನೀಡಿದ್ಧಾರೆ.

ವಿಮಾನಯಾನ ಸಿಬ್ಬಂದಿ ಮತ್ತು ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸಹಕರಿಸಿ ಈ ಯೋಜನೆ ಯಶಸ್ವಿಯಾಗಲು ಸಹಕಾರ ನೀಡಿದ್ದಾರೆ ಎಂದು ಹರ್​​ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಈ ಯೋಜನೆಯಡಿ ಹಡಗುಗಳ ಮೂಲಕವೂ ಕೆಲವು ದೇಶಗಳಿಂದ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲಾಗಿದೆ