ಶಿಖರಗಳ ನಡುವೆ ಸಿಕ್ಕಿಬಿದ್ದಿದ್ದ ಚೀನಾ ಪ್ರಜೆಗಳಿಗೆ ಊಟ, ಬಟ್ಟೆ ನೀಡಿದ ಸೇನೆ

06-09-20 07:46 pm       Headline Karnataka News Network   ದೇಶ - ವಿದೇಶ

ಸಿಕ್ಕಿಂ ಗಡಿಭಾಗದಲ್ಲಿ ಪರ್ವತ ಶಿಖರಗಳ ನಡುವೆ ಸಿಕ್ಕಿಬಿದ್ದಿದ್ದ ಚೀನಾ ಪ್ರಜೆಗಳನ್ನು ಭಾರತದ ಯೋಧರು ರಕ್ಷಿಸಿದ್ದಾರೆ.

ನವದೆಹಲಿ, ಸೆಪ್ಟಂಬರ್ 6: ಅತ್ತ ಕಾಶ್ಮೀರ ಗಡಿಭಾಗ ಲಡಾಖ್ ನಲ್ಲಿ ಚೀನಾ ಪಡೆ ಕಾಲು ಕೆರೆದು ಯುದ್ಧಕ್ಕೆ ಬರುತ್ತಿದ್ದರೆ ಇತ್ತ ಸಿಕ್ಕಿಂ ಗಡಿಭಾಗದಲ್ಲಿ ಪರ್ವತ ಶಿಖರಗಳ ನಡುವೆ ಸಿಕ್ಕಿಬಿದ್ದಿದ್ದ ಚೀನಾ ಪ್ರಜೆಗಳನ್ನು ಭಾರತದ ಯೋಧರು ರಕ್ಷಿಸಿದ್ದಾರೆ.

ಉತ್ತರ ಸಿಕ್ಕಿಂ ಗಡಿಭಾಗದಲ್ಲಿ 17 ಸಾವಿರ ಅಡಿ ಎತ್ತರದಲ್ಲಿ ಮೈನಸ್ ಡಿಗ್ರಿ ಚಳಿಯಲ್ಲಿ ಮೂವರು ಚೀನಾ ಪ್ರಜೆಗಳು ಸಿಕ್ಕಿಬಿದ್ದಿದ್ದರು. ದಾರಿ ತಪ್ಪಿ ಭಾರತದ ಗಡಿಗೆ ಬಂದಿದ್ದ ಮೂವರಿಗೆ ಭಾರತೀಯ ಯೋಧರು ಆಹಾರ, ಬಟ್ಟೆಗಳನ್ನು ನೀಡಿ ಮಾನವೀಯ ನೆಲೆಯಲ್ಲಿ ಆರೈಕೆ ಮಾಡಿದ್ದಾರೆ. ಶೂನ್ಯಕ್ಕಿಂತ ಕಡಿಮೆ ಉಷ್ಣತೆ ಇರುವಲ್ಲಿ ಮಹಿಳೆ ಸೇರಿದಂತೆ ಮೂವರು ಚೀನಾ ಪ್ರಜೆಗಳು ಪತ್ತೆಯಾಗಿದ್ದರು. ಅವರಿಗೆ ಊಟ ಮತ್ತು ಬಟ್ಟೆ ನೀಡಿ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದೇವೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ. ಭಾರತೀಯ ಯೋಧರ ಸಹಾಯಕ್ಕಾಗಿ ಚೀನಾ ಪ್ರಜೆಗಳು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಟ್ವೀಟ್ ನಲ್ಲಿ ಸೇನೆ ತಿಳಿಸಿದೆ.

ಒಂದೆಡೆ ಚೀನಾ ಸೇನೆ ಆಕ್ರಮಣಕಾರಿ ನೀತಿ ತೋರುತ್ತಿರುವಾಗಲೇ ಭಾರತೀಯ ಸೇನೆ ಔದಾರ್ಯ ಮೆರೆದಿರುವುದು ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.